ನವದೆಹಲಿ: ತಂದೆಯೇ ಮಗುವಿನ ಸಹಜ ಕಸ್ಟೋಡಿಯನ್ ಆಗಿದ್ದು, ಮಗುವಿನ ಲಾಲನೆ, ಪಾಲನೆ ಮಾಡಲು ಅವರೇ ಸೂಕ್ತ ವ್ಯಕ್ತಿ ಎಂದು ಸುಪ್ರೀಂಕೋರ್ಟ್ ಹೇಳಿದೆ.
ನಾದಿನಿಯರ ಬಳಿ ಇದ್ದ ಅಪ್ರಾಪ್ತ ವಯಸ್ಕ ಮಗಳನ್ನು ತನ್ನ ಕಸ್ಟಡಿಗೆ ಪಡೆದುಕೊಳ್ಳಲು ವ್ಯಕ್ತಿ ಮಾಡಿದ ಮನವಿಗೆ ನ್ಯಾಯಾಲಯ ಅನುಮತಿ ನೀಡಿದೆ. ಹೆರಿಗೆಯಾದ ನಂತರ ಕೊರೋನಾದಿಂದ ಪತ್ನಿ ಮೃತಪಟ್ಟಿದ್ದು, ಪತಿ ಗೌತಮಕುಮಾರ್ ದಾಸ್ ತನ್ನ ಪುತ್ರಿಯನ್ನು ನಾದಿನಿಯರ ಬಳಿ ಬಿಟ್ಟಿದ್ದರು.
ಕೆಲವು ವರ್ಷಗಳ ನಂತರ ಪುತ್ರಿಯನ್ನು ತನ್ನ ಸುಪರ್ದಿಗೆ ಪಡೆಯಲು ಅವರು ಮುಂದಾಗಿದ್ದರೂ ನಾದಿನಿಯರು ಒಪ್ಪಿರಲಿಲ್ಲ. ಮಗಳನ್ನು ಸುಪರ್ದಿಗೆ ನೀಡಲು ನಾದಿನಿಯರು ಇದಕ್ಕೆ ನಿರಾಕರಿಸಿದ್ದರಿಂದ ಗೌತಮ್ ಕುಮಾರ್ ದಾಸ್ ನ್ಯಾಯಾಲಯದ ಮೊರೆ ಹೋಗಿದ್ದರು.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಕೆ.ವಿ. ವಿಶ್ವನಾಥನ್ ಅವರಿದ್ದ ಪೀಠ ಗೌತಮಕುಮಾರ್ ಅವರ ಅರ್ಜಿ ವಿಚಾರಣೆ ನಡೆಸಿದ್ದು, ದುರದೃಷ್ಟಕರ ಸನ್ನಿವೇಶಗಳ ಕಾರಣ ಅರ್ಜಿದಾರ ತನ್ನ ಪುತ್ರಿಯನ್ನು ನಾದಿನಿಯರ ಬಳಿ ಬಿಟ್ಟಿದ್ದರು. ಕೆಲವು ವರ್ಷಗಳ ಕಾಲ ಅವರು ಬಾಲಕಿಯನ್ನು ಸಾಕಿ ಸಲಹಿದ್ದಾರೆ ಎಂದ ಮಾತ್ರಕ್ಕೆ ಬಾಲಕಿಯನ್ನು ತಂದೆಯ ಕಸ್ಟಡಿಗೆ ನೀಡಲು ನಿರಾಕರಿಸುವುದಕ್ಕೆ ಆಧಾರವಾಗುವುದಿಲ್ಲ ಎಂದು ತಿಳಿಸಿದೆ.
ವಿವಿಧ ತೀರ್ಪುಗಳನ್ನು ಉಲ್ಲೇಖಿಸಿದ ಪೀಠ, ಸಂಬಂಧಿಕರು ಮಗುವನ್ನು ಸ್ವಲ್ಪ ಸಮಯದವರೆಗೆ ನೋಡಿಕೊಳ್ಳಬಹುದು. ಆದರೆ, ಮಗುವಿನ ಪಾಲನೆಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಮಗುವನ್ನು ನೋಡಿಕೊಳ್ಳಲು ತಂದೆ ಅನರ್ಹರು ಎಂಬುದು ಸರಿಯಲ್ಲ. ತಂದೆಯೇ ಮಗುವಿನ ಸಹಜ ಕಸ್ಟೋಡಿಯನ್ ಆಗಿದ್ದು, ಮಗುವಿನ ಲಾಲನೆ, ಪಾಲನೆ ಮಾಡಲು ಸೂಕ್ತ ವ್ಯಕ್ತಿ ಎಂದು ಆದೇಶದಲ್ಲಿ ತಿಳಿಸಿದೆ.