
ಅನಿವಾರ್ಯ ಸಂದರ್ಭಗಳಲ್ಲಿ ಮಹಿಳೆಯರು ಗರ್ಭಪಾತ ಮಾಡಿಸಿಕೊಳ್ಳಬೇಕಾಗಿ ಬರುತ್ತದೆ. ಬಾಂಬೆ ಹೈಕೋರ್ಟ್ ಇತ್ತೀಚೆಗೆ 25 ವಾರಗಳ ಗರ್ಭಿಣಿಯಾಗಿದ್ದ 19 ವರ್ಷದ ಮಹಿಳೆಗೆ ಗರ್ಭಪಾತಕ್ಕೆ ಅನುಮತಿ ನೀಡಿತ್ತು. ಆದರೆ ತಡವಾಗಿ ಗರ್ಭಪಾತ ಮಾಡಿಸಿಕೊಳ್ಳುವುದರಿಂದ ಸಾಕಷ್ಟು ಸಮಸ್ಯೆಗಳಾಗುತ್ತವೆ. ಗರ್ಭಪಾತ ಮಾಡಿಸಿಕೊಳ್ಳುವ ನಿರ್ಧಾರ ವೈಯಕ್ತಿಕವಾದದ್ದು. ಆದರೆ ಅದರಿಂದಾಗುವ ಅಪಾಯಗಳ ಬಗ್ಗೆ ಮಹಿಳೆಯರು ತಿಳಿದಿರಬೇಕು.
ದೈಹಿಕ ಸಮಸ್ಯೆ
ತಡವಾದ ಗರ್ಭಪಾತಕ್ಕೆ ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ. ಗರ್ಭಾಶಯದ ಗಾತ್ರವು ಹೆಚ್ಚಾದಂತೆ ಆಪರೇಶನ್ ಸಮಯದಲ್ಲಿ ಅತಿಯಾದ ರಕ್ತಸ್ರಾವದ ಅಪಾಯ ಕೂಡ ಹೆಚ್ಚಾಗುತ್ತದೆ. ಇದಲ್ಲದೆ ಸೋಂಕಿನ ಅಪಾಯವೂ ಹೆಚ್ಚು.
ಅಪೂರ್ಣ ಗರ್ಭಪಾತ
ಕೆಲವು ಸಂದರ್ಭಗಳಲ್ಲಿ ಗರ್ಭಪಾತ ಪ್ರಕ್ರಿಯೆಯು ಅಪೂರ್ಣವಾಗಿ ಉಳಿಯಬಹುದು. ನಂತರ ಹೆಚ್ಚುವರಿ ವೈದ್ಯಕೀಯ ಸಹಾಯದ ಅಗತ್ಯವಿರುತ್ತದೆ. ತಡವಾಗಿ ಗರ್ಭಪಾತ ಮಾಡಿಸಿಕೊಂಡಲ್ಲಿ ಹೆಚ್ಚು ಸೆಳೆತ ಮತ್ತು ನೋವು ಅನುಭವಿಸಬೇಕಾಗುತ್ತದೆ.
ಮಾನಸಿಕ ಆರೋಗ್ಯ
ಗರ್ಭಪಾತದ ನಿರ್ಧಾರವು ಭಾವನಾತ್ಮಕವಾಗಿ ಕಷ್ಟಕರ. ತಡವಾದ ಗರ್ಭಪಾತದ ಸಂದರ್ಭದಲ್ಲಿ ಮಹಿಳೆ ಹೊಟ್ಟೆಯಲ್ಲಿರುವ ಮಗುವಿನೊಂದಿಗೆ ಮಾನಸಿಕವಾಗಿ ಸಂಬಂಧ ಬೆಳೆಸಿಕೊಂಡಿರುತ್ತಾಳೆ. ಇದು ಬಲವಾದ ಭಾವನಾತ್ಮಕ ಪ್ರಕ್ಷುಬ್ಧತೆ ಮತ್ತು ವಿಷಾದದ ಭಾವನೆಗಳಿಗೆ ಕಾರಣವಾಗಬಹುದು.
ಭವಿಷ್ಯದ ಗರ್ಭಧಾರಣೆಗೆ ಸಂಬಂಧಿಸಿದ ಸಮಸ್ಯೆಗಳು
ಕೆಲವು ಸಂದರ್ಭಗಳಲ್ಲಿ ಈ ರೀತಿಯ ಗರ್ಭಪಾತವು ಗರ್ಭಕಂಠಕ್ಕೆ ಹಾನಿಯನ್ನುಂಟುಮಾಡುತ್ತದೆ. ಇದರಿಂದ ಮಹಿಳೆ ಭವಿಷ್ಯದಲ್ಲಿ ಗರ್ಭಿಣಿಯಾಗಲು ಕಷ್ಟವಾಗುತ್ತದೆ.
ಪ್ರತಿ ಗರ್ಭಪಾತದ ಅನುಭವವು ವಿಭಿನ್ನವಾಗಿರುತ್ತದೆ. ಎಲ್ಲಾ ಮಹಿಳೆಯರಿಗೂ ಅಪಾಯವಾಗುವುದಿಲ್ಲ. ಆದರೆ ಅದರ ಬಗ್ಗೆ ತಿಳಿದುಕೊಂಡಿರಬೇಕು ಮತ್ತು ವೈದ್ಯರನ್ನು ಸಂಪರ್ಕಿಸಬೇಕು. ವೈದ್ಯರು ಗರ್ಭಿಣಿಯ ದೈಹಿಕ ಮತ್ತು ಮಾನಸಿಕ ಸ್ಥಿತಿಯನ್ನು ನಿರ್ಣಯಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ.