ಕಳೆದ ಫೆಬ್ರುವರಿಯಿಂದ ದೇಶಾದ್ಯಂತ ಕಡ್ಡಾಯಗೊಂಡ ಡಿಜಿಟಲ್ ಟೋಲ್ ಪಾವತಿ ವ್ಯವಸ್ಥೆ ’ಫಾಸ್ಟ್‌ಟ್ಯಾಗ್’ ಮೂಲಕ ಅಕ್ಟೋಬರ್ ತಿಂಗಳಲ್ಲಿ ದಾಖಲೆ ಮೊತ್ತದ ಶುಲ್ಕ ಸಂಗ್ರಹವಾಗಿದೆ. ಒಂದೇ ತಿಂಗಳಲ್ಲಿ 21.42 ಕೋಟಿ ಜನರಿಂದ ವಹಿವಾಟು ನಡೆದಿದ್ದು, ಬರೋಬ್ಬರಿ 3,356 ಕೋಟಿ ರೂ. ಸಂಗ್ರಹವಾಗಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ.
ಹಬ್ಬಗಳ ಋತುವಾದ್ದರಿಂದ ಜನರು ಹೆಚ್ಚಿನ ಪ್ರಯಾಣ ಮಾಡಿದ್ದಾರೆ. ಹಾಗಾಗಿ ಹೆದ್ದಾರಿಗಳಲ್ಲಿನ ಟೋಲ್‌ಗಳಲ್ಲಿ ಶುಲ್ಕ ದಾಖಲೆ ಮೊತ್ತದಲ್ಲಿ ಸಂಗ್ರಹವಾಗಿದೆ.
ಕಳೆದ ಶನಿವಾರ ಒಂದೇ ದಿನ ಅತ್ಯಧಿಕ, ಅಂದರೆ 122.81 ಕೋಟಿ ರೂ. ಟೋಲ್ ಶುಲ್ಕವು ಫಾಸ್ಟ್‌ಟ್ಯಾಗ್ ಮೂಲಕ ಸರಕಾರದ ಬೊಕ್ಕಸಕ್ಕೆ ಹರಿದುಬಂದಿದೆ. ಕಳೆದ ಸೆಪ್ಟೆಂಬರ್‌ನಲ್ಲಿ 19.36 ಕೋಟಿ ಮಂದಿ ಪಾವತಿಸುವ ಮೂಲಕ 3000 ಕೋಟಿ ರೂ. ಶುಲ್ಕ ಸಂಗ್ರಹವಾಗಿತ್ತು. ಆಗಸ್ಟ್‌ನಲ್ಲಿ 20.12 ಕೋಟಿ ಜನರಿಂದ 3,076.56 ಕೋಟಿ ರೂ. ಸಂಗ್ರಹವಾಗಿದ್ದು ಕೂಡ, ಈ ಹಿಂದಿನ ದಾಖಲೆ ಎನಿಸಿತ್ತು.
ಗ್ರಾಹಕರಿಗೆ ಗುಡ್ ನ್ಯೂಸ್: ಮನೆಯಲ್ಲೇ ಕುಳಿತು ಬದಲಿಸಬಹುದು ಬ್ಯಾಂಕ್ ಶಾಖೆ
ರಾಷ್ಟ್ರೀಯ ಹೆದ್ದಾರಿಯ ಟೋಲ್‌ಪ್ಲಾಜಾಗಳಲ್ಲಿ ಕಾರುಗಳು ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ನಿಲ್ಲುವುದು. ಆ ಮೂಲಕ ವಾಹನ ದಟ್ಟಣೆ, ಜನದಟ್ಟಣೆ ಹೆಚ್ಚಿ ಪ್ರಯಾಣವೇ ಸಾಕಾಗಿ ಹೋಗುವ ಜಂಜಾಟವು ’ಫಾಸ್ಟ್‌ಟ್ಯಾಗ್’ ಬಳಕೆಯಿಂದಾಗಿ ನೀಗಿದೆ. ಮುಂಚಿತವಾಗಿಯೇ ಸ್ವಲ್ಪ ಪ್ರಮಾಣದ ಹಣವನ್ನು ಫಾಸ್ಟ್‌ಟ್ಯಾಗ್ ಖಾತೆಗೆ ವಾಹನದ ಮಾಲೀಕರು ಜಮೆ ಮಾಡಿರುತ್ತಾರೆ.
ಟೋಲ್‌ಗಳಲ್ಲಿನ ಫಾಸ್ಟ್‌ಟ್ಯಾಗ್ ಸ್ಕ್ಯಾನರ್‌ಗಳು ವೇಗವಾಗಿ ವಾಹನದ ಮೇಲಿನ ಫಾಸ್ಟ್‌ಟ್ಯಾಗ್ ಸ್ಟಿಕ್ಕರ್‌ಗಳನ್ನು ಪರಿಶೀಲಿಸುತ್ತವೆ. ನಿಗದಿತ ಶುಲ್ಕವು ಆಟೋಮ್ಯಾಟಿಕ್ ಆಗಿ ವಾಹನದ ಮಾಲೀಕರ ಖಾತೆಯಿಂದ ಕಡಿತಗೊಂಡು ಟೋಲ್ ನಿರ್ವಾಹಕರ ಖಾತೆಗೆ ಕಮೆ ಆಗುತ್ತದೆ. ಇಂಥ ಸ್ವಯಂಚಾಲಿತ ಡಿಜಿಟಲ್ ವ್ಯವಸ್ಥೆಯಿಂದಾಗಿ ಫಾಸ್ಟ್‌ಟ್ಯಾಗ್ ದೇಶಾದ್ಯಂತ ಜನಪ್ರಿಯವಾಗಿದೆ.