ಇನ್ ಸ್ಟಾಗ್ರಾಮ್ ನಲ್ಲಿ ಬೈಕ್ ನಲ್ಲಿ ಸ್ಟಂಟ್ ಮಾಡುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೆಬಲ್ ಅಮಾನತುಗೊಳಿಸಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಬಗ್ಗೆ ದೂರುಗಳು ಬಂದ ನಂತರ, ಹಿರಿಯ ಪೊಲೀಸ್ ವರಿಷ್ಠಾಧಿಕಾರಿ(ಎಸ್‌ಎಸ್‌ಪಿ) ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಗೋರಖ್‌ಪುರದಲ್ಲಿ ಕಾರ್ಯನಿರ್ವಹಿಸುವ ಸಂದೀಪ್ ಕುಮಾರ್ ಚೌಬೆ ಅವರು ವಿಡಿಯೊವನ್ನು ಪೋಸ್ಟ್ ಮಾಡಿರುವುದು ಕಂಡುಬಂದ ನಂತರ ಅವರನ್ನು ಅಮಾನತುಗೊಳಿಸಲಾಯಿತು.
ವಿಡಿಯೋದಲ್ಲಿ ಕಾನ್‌ಸ್ಟೆಬಲ್ ಸಂದೀಪ್ ಕುಮಾರ್ ಚೌಬೆ ಅವರು ಸಮವಸ್ತ್ರ ಧರಿಸಿ ರೇಸಿಂಗ್ ಬೈಕ್ ನಲ್ಲಿ ಸ್ಟಂಟ್ ಮಾಡುತ್ತಿರುವುದನ್ನು ಕಾಣಬಹುದು. ವಿಡಿಯೋ ಜೊತೆಗೆ ‘ನಿನ್ನ ಶತ್ರುಗಳಿಗೆ ಹೆದರುವುದಿಲ್ಲವೇ’ ಎಂದು ಹುಡುಗಿಯೊಬ್ಬಳು ಆತನನ್ನು ಕೇಳುವ ಡೈಲಾಗ್ ಕೂಡ ಸೇರಿಸಿದ್ದಾರೆ.
ಎಸ್‌ಎಸ್‌ಪಿ ಡಾ.ಗೌರವ್ ಗ್ರೋವರ್ ಅವರು ಫೆಬ್ರವರಿ 8, 2023 ರಂದು ಯಾವುದೇ ಪೊಲೀಸ್ ಸಿಬ್ಬಂದಿ ಖಾಸಗಿ ಫೋಟೋಗಳು ಅಥವಾ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವುದನ್ನು ನಿಷೇಧಿಸುವ ನಿರ್ದೇಶನವನ್ನು ಉತ್ತರ ಪ್ರದೇಶ ಪೊಲೀಸ್ ಇಲಾಖೆ ಹೊರಡಿಸಿದೆ ಎಂದು ಹೇಳಿದ್ದಾರೆ.
ಈ ನಿರ್ದೇಶನದ ಹೊರತಾಗಿಯೂ, ಕಾನ್‌ಸ್ಟೆಬಲ್ ಸಂದೀಪ್ ಕುಮಾರ್ ಚೌಬೆ ಅವರು ತಮ್ಮ ವೀಡಿಯೊವನ್ನು ಪೋಸ್ಟ್ ಮಾಡುವ ಮೂಲಕ ಆದೇಶವನ್ನು ಉಲ್ಲಂಘಿಸಿದ್ದಾರೆ. ಇಂತಹ ಕ್ರಮಗಳು ಶಿಸ್ತಿನ ಕೊರತೆಯ ಪ್ರತೀಕವಾಗಿದ್ದು, ಇದರ ಪರಿಣಾಮವಾಗಿ ಕಾನ್ಸ್‌ಟೇಬಲ್‌ನನ್ನು ಅಮಾನತುಗೊಳಿಸಲಾಗಿದೆ ಎಂದು ಎಸ್‌ಎಸ್‌ಪಿ ತಿಳಿಸಿದ್ದಾರೆ.