ಕೊಚ್ಚಿ: ಫ್ಯಾಷನ್ ಡಿಸೈನರ್ ಆಗಿರುವ ಮಹಿಳೆಯನ್ನು ಫ್ಲ್ಯಾಟ್ ನಲ್ಲಿ ಕೂಡಿಹಾಕಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಲಾಗಿದೆ. ಲಿವಿಂಗ್ ರಿಲೇಶನ್ ಶಿಪ್ ನಲ್ಲಿದ್ದ ಸಂಗಾತಿಯೇ ಇಂತಹ ಕೃತ್ಯ ಎಸಗಿರುವುದಾಗಿ ಮಹಿಳೆ ಆರೋಪಿಸಿದ್ದಾಳೆ.
ಫೆಬ್ರವರಿ 20 ರಿಂದ ಮಾರ್ಚ್ 8 ರವರೆಗೆ ಕೊಚ್ಚಿಯ ಮೆರೈನ್ ಡ್ರೈವ್‌ನ ಫ್ಲ್ಯಾಟ್‌ನೊಳಗೆ ಆಕೆಯನ್ನು ಕೂಡಿ ಹಾಕಲಾಗಿತ್ತು. ಈ ಸಮಯದಲ್ಲಿ ಮಹಿಳೆ ಮೇಲೆ ಅತ್ಯಾಚಾರ, ಹಲ್ಲೆ ನಡೆಸಲಾಗಿದ್ದು, ಬೆದರಿಕೆ ಹಾಕಲಾಗಿದೆ. ಅಲ್ಲದೆ ಮಹಿಳೆಯ ಬೆತ್ತಲೆಫೋಟೊಗಳನ್ನು ಸೆರೆ ಹಿಡಿಯಲಾಗಿದೆ ಎಂದು ಆರೋಪಿಸಲಾಗಿದೆ.
ಫ್ಯಾಷನ್ ಡಿಸೈನರ್ ಆಗಿರುವ ಮಹಿಳೆಗೆ ಕಿರುಕುಳ ನೀಡಿದ ಆರೋಪಿಯನ್ನು ಮಾರ್ಟಿನ್ ಜೋಸೆಫ್ ಎಂದು ಗುರುತಿಸಲಾಗಿದೆ. ತ್ರಿಶೂರ್ ಪುಟ್ಟೇಕರ ಮೂಲದ ಜೋಸೆಫ್ ಉದ್ಯಮಿಯಾಗಿದ್ದಾನೆ. ಮಹಿಳೆ ಮೂಗಿಗೆ ಹಲ್ಲೆ ಮಾಡಿದ ಛಾಯಾಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ.
ಜೋಸೆಫ್ ಮಹಿಳೆಗೆ ಬೆಲ್ಟ್ ನಿಂದ ಹೊಡೆದು ಮೆಣಸಿನ ಪುಡಿಯೊಂದಿಗೆ ಬೆರೆಸಿದ ಬಿಸಿ ನೀರನ್ನು ಆಕೆಯ ಮೇಲೆ ಸುರಿದಿದ್ದಾನೆ. ಕಿರುಕುಳ ನೀಡಿ ಪದೇ ಪದೇ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆ ಬೆಳಕಿಗೆ ಬಂದ ನಂತರ ಎರ್ನಾಕುಲಂ ಸೆಂಟ್ರಲ್ ಪೊಲೀಸರು ಆರೋಪಿ ಜೋಸೆಫ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಏಪ್ರಿಲ್ 8 ರಂದು ಮ್ಯಾಜಿಸ್ಟ್ರೇಟ್ ಮುಂದೆ ಆತನನ್ನು ಹಾಜರುಪಡಿಸಿದ್ದಾರೆ.
ಫೆಬ್ರವರಿ 15, 2020 ರಿಂದ ಆರೋಪಿಯೊಂದಿಗೆ ಮಹಿಳೆ ವಾಸವಾಗಿದ್ದಾಳೆ. ಆರಂಭದಲ್ಲಿ ಅವರು ಕಡವಂತ್ರದ ಫ್ಲ್ಯಾಟ್‌ನಲ್ಲಿಯೇ ಇದ್ದರು. ನಂತರ ಮರೀನ್ ಡ್ರೈವ್ ಗೆ ಸ್ಥಳಾಂತರಗೊಂಡಿದ್ದರು. ಷೇರು ಮಾರುಕಟ್ಟೆಯಲ್ಲಿ 5 ಲಕ್ಷ ರೂಪಾಯಿ ಹೂಡಿಕೆ ಮಾಡಲು ಕೇಳಿಕೊಂಡಿದ್ದ ಜೋಸೆಫ್ ಆ ಹಣ ಕೊಡುವಲ್ಲಿ ವಿಫಲವಾಗಿದ್ದ. ಕಳೆದ ವರ್ಷ ಮಹಿಳೆಯನ್ನು ನಿಂದಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. 2020 ರ ಡಿಸೆಂಬರ್ ನಲ್ಲಿ ಮಹಿಳೆ ಮನೆಯಿಂದ ಹೊರಬಂದು ನಂತರ ವಾಪಸಾಗಿದ್ದರು.
ಫೆಬ್ರವರಿ 20 ರಿಂದ ಮಾರ್ಚ್ 8 ರವರೆಗೆ ಮಹಿಳೆಯನ್ನು ಕೂಡಿಹಾಕಿ ಕಿರುಕುಳ ನೀಡಿದ್ದಲ್ಲದೇ, ಆಕೆಯ ಬೆತ್ತಲೆ ಚಿತ್ರಗಳನ್ನು ತೆಗೆದು ಪೋಷಕರಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಮೇ 18ರಂದು ಎರ್ನಾಕುಲಂನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಜೋಸೆಫ್ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಮೇ 27 ರಂದು ಕೇರಳ ಹೈಕೋರ್ಟ್ ಗೆ ಆರೋಪಿ ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆಯನ್ನು ಜೂನ್ 8 ಕ್ಕೆ ಮುಂದೂಡಲಾಗಿತ್ತು. ಪ್ರಾಸಿಕ್ಯೂಟರ್ ಅಭಿಪ್ರಾಯಗಳನ್ನು ಕೋರಿದ ನಂತರ ವಿಚಾರಣೆಯನ್ನು ಜೂನ್ 11 ಕ್ಕೆ ಮುಂದೂಡಲಾಗಿದೆ.