ಚಿಕ್ಕಬಳ್ಳಾಪುರ: ಪತಿ ನಿಧನದ ಬಳಿಕ ಸಿಕ್ಕ ಸಿಕ್ಕವರಿಗೆ ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದ ಮಹಿಳೆಯನ್ನು ಚಿಕ್ಕಬಳ್ಳಾಪುರ ಜಿಲ್ಲೆ ಸೈಬರ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೋಮಲಾ ಬಂಧಿತ ಮಹಿಳೆ. ಆಕೆಯ ಪತಿ ಮೃತಪಟ್ಟು 7 ವರ್ಷಗಳಾಗಿದ್ದು, ಐಷಾರಾಮಿ ಜೀವನಕ್ಕೆ ಒಗ್ಗಿಕೊಂಡಿದ್ದ ಕೋಮಲಾ ಪರಪುರುಷರ ಹಿಂದೆ ಬಿದ್ದು ಮದುವೆಯ ಆಮಿಷವೊಡ್ಡಿ ಹಣ ದೋಚುವುದನ್ನೇ ರೂಢಿಸಿಕೊಂಡಿದ್ದಳು. ಆಕೆಯ ಮಾತಿಗೆ ಮರುಳಾದವರು ಲಕ್ಷಾಂತರ ಹಣ ಕೊಟ್ಟು ಕೈಕೈಹಿಸುಕಿಕೊಳ್ಳುವಂತಾಗಿದೆ.
ಶಿವಮೊಗ್ಗ ಮೂಲದ ಕೋಮಲಾ ಬೆಂಗಳೂರಿನಲ್ಲಿ ನೆಲೆಸಿದ್ದು, ವಿಲಾಸಿ ಜೀವನಕ್ಕಾಗಿ ಅನೇಕ ಪುರುಷರಿಗೆ ಇದೇ ರೀತಿ ವಂಚನೆ ಮಾಡಿ ಲಕ್ಷಾಂತರ ರೂಪಾಯಿ ಹಣ ಪಡೆದಿರುವುದು ತನಿಖೆಯ ವೇಳೆ ಗೊತ್ತಾಗಿದೆ. ಗೌರಿಬಿದನೂರಿನ ರಾಘವೇಂದ್ರ ಎಂಬುವರನ್ನು ಮ್ಯಾಟ್ರಿಮೋನಿಯಲ್ ವೆಬ್ಸೈಟ್ ಮೂಲಕ ಪರಿಚಯ ಮಾಡಿಕೊಂಡಿದ್ದ ಕೋಮಲಾ ಪತಿ ಮೃತಪಟ್ಟಿದ್ದು ಪರಿಹಾರವಾಗಿ ಬಂದ ಆರು ಕೋಟಿ ರೂಪಾಯಿ ಹಣ ಪಡೆಯಲು ತೆರಿಗೆ ಪಾವತಿಸಬೇಕಿದೆ ಎಂದು ನಂಬಿಸಿ ಖಾತೆಗೆ 7.40 ಲಕ್ಷ ರೂ. ಹಾಕಿಸಿಕೊಂಡಿದ್ದಾಳೆ. ನಂತರ ಫೋನ್ ನಂಬರ್ ಬ್ಲಾಕ್ ಮಾಡಿದ್ದಾಳೆ.
ರಾಘವೇಂದ್ರ ಸೈಬರ್ ಪೋಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಿ ಆಕೆಯ ಬಳಿ ಇದ್ದ ಆ್ಯಪಲ್ ಫೋನ್, ಆ್ಯಪಲ್ ವಾಚ್ ಮತ್ತು 20 ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ. ವಿಚಾರಣೆ ವೇಳೆ ಇನ್ನೂ ಹಲವರಿಗೆ ವಂಚನೆ ಮಾಡಿರುವುದು ಗೊತ್ತಾಗಿದೆ. ಈಕೆಯ ಪತಿ ಕೆಪಿಟಿಸಿಎಲ್ ನೌಕರರಾಗಿದ್ದು, 2017ರಲ್ಲಿ ಮೃತಪಟ್ಟಿದ್ದರು. ಕೋಮಲಾಗೆ 20 ವರ್ಷದ ಪುತ್ರ, 16 ವರ್ಷದ ಪುತ್ರಿ ಇದ್ದಾರೆ. ಐಷಾರಾಮಿ ಜೀವನ ನಡೆಸಲು ಮದುವೆಯಾಗುವ ನಾಟಕವಾಡಿ ವಂಚಿಸಿ ಹಣ ಪೀಕುತ್ತಿದ್ದಳು ಎನ್ನಲಾಗಿದೆ.