ಶಿವಮೊಗ್ಗ: ಅಸೆಟ್ ಮ್ಯಾನೇಜ್ಮೆಂಟ್ ಎಂಬ ಖಾತೆಯಲ್ಲಿ ಹಣ ಹೂಡಿಕೆ ಮಾಡಿದ ಸೊರಬದ ಉದ್ಯಮಿಯೊಬ್ಬರು 20 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
ಫೇಸ್ಬುಕ್ ನಲ್ಲಿ ಷೇರು ಮಾರುಕಟ್ಟೆಯಲ್ಲಿ ಲಾಭ ಪಡೆಯುವ ಬಗ್ಗೆ ಉದ್ಯಮಿ ಮುಖೇಶ್ ಅಂಬಾನಿ ವಿವರಣೆ ನೀಡಿದ ವಿಡಿಯೋ ನೋಡಿದ್ದ ಉದ್ಯಮಿ ಅದರ ಕೆಳಗಿದ್ದ ವಾಟ್ಸಾಪ್ ಗ್ರೂಪ್ ಸೇರಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಕುರಿತು ಎರಡು ತಿಂಗಳ ತರಬೇತಿ ನೀಡಲಾಗಿತ್ತು. ಮೇ 1ರಂದು ಅನಿತಾ ಟಿಬ್ರವಾಲ್ ಎಂಬ ಟೆಲಿಗ್ರಾಂ ಗ್ರೂಪ್ ಗೆ ಉದ್ಯಮಿಯನ್ನು ಜಾಯಿನ್ ಮಾಡಲಾಗಿತ್ತು.
ಅಸೆಟ್ ಮ್ಯಾನೇಜ್ಮೆಂಟ್ ಎಂಬ ಖಾತೆಯನ್ನು ಸೃಷ್ಟಿಸಿಕೊಡಲಾಗಿತ್ತು. ಅದಕ್ಕೆ ಹಣ ಹೂಡಿಕೆ ಮಾಡುವಂತೆ ಟೆಲಿಗ್ರಾಂ ಖಾತೆಯ ಮೂಲಕ ಸೂಚಿಸಿದ್ದು, ಹಂತ ಹಂತವಾಗಿ ಉದ್ಯಮಿ 20 ಲಕ್ಷ ರೂಪಾಯಿ ವರ್ಗಾಯಿಸಿದ್ದಾರೆ. ನಂತರ ಹಣ ವಿತ್ ಡ್ರಾ ಮಾಡಲು ಹೋದಾಗ ಅಸೆಟ್ ಮ್ಯಾನೇಜ್ಮೆಂಟ್ ಖಾತೆಯಲ್ಲಿ 0 ಬ್ಯಾಲೆನ್ಸ್ ತೋರಿಸಿದೆ. ವಂಚನೆಗೆ ಒಳಗಾಗಿರುವುದನ್ನು ಅರಿತ ಉದ್ಯಮಿ ಶಿವಮೊಗ್ಗದ ಸಿಇಎನ್ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.