ಬೆಳಗಾವಿ: ಬೆಳಗಾವಿ ಜಿಲ್ಲೆಯ ಗೋಕಾಕ್ ನ ಮಹಾಲಕ್ಷ್ಮಿ ಅರ್ಬನ್ ಕೋ ಆಪರೇಟಿವ್ ಕ್ರೆಡಿಟ್ ಬ್ಯಾಂಕ್ ನಲ್ಲಿ 74.87 ಕೋಟಿ ವಂಚನೆ ನಡೆದಿದೆ. ಬ್ಯಾಂಕಿನ ವ್ಯವಸ್ಥಾಪಕ ಗುಮಾಸ್ತ ಸೇರಿದಂತೆ 14 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರ ಬಂಧನಕ್ಕೆ ಮೂರು ತಂಡಗಳನ್ನು ರಚಿಸಲಾಗಿದೆ.
ಎಸ್ಪಿ ಭೀಮಾಶಂಕರ ಗುಳೇದ ಈ ಬಗ್ಗೆ ಮಾಹಿತಿ ನೀಡಿದ್ದು, ವಂಚನೆ ಪ್ರಕರಣ ಸಂಬಂಧ ಬ್ಯಾಂಕಿನ ಅಧ್ಯಕ್ಷ ಜಿತೇಂದ್ರ ಬಾಳಾ ಸಾಹೇಬ ಮಾಂಗಳೇಕರ ದೂರು ದಾಖಲಿಸಿದ್ದಾರೆ ಎಂದು ತಿಳಿಸಿದ್ದಾರೆ.
ಬ್ಯಾಂಕ್ ವ್ಯವಸ್ಥಾಪಕ ಸಿದ್ದಪ್ಪ ಸದಾಶಿವ ಪವಾರ, ಸಿಬ್ಬಂದಿ ಸಾಗರ ಹನುಮಂತ ಸಬಕಾಳೆ, ವಿಶ್ವನಾಥ, ಸಂಬಾಜಿ, ದಯಾನಂದ, ಸಂಜನಾ, ಮಾಲವ್ವ, ಗೌರವ್ವ, ಚಂದ್ರವ್ವ, ಮಾಯವ್ವ, ಪರಸಪ್ಪ, ರಾಧಾ, ಸಂದೀಪ, ಕಿರಣ ನಾಪತ್ತೆಯಾಗಿದ್ದಾರೆ. ಇವರೆಲ್ಲರೂ ಸೇರಿ 2021 ರಲ್ಲಿ ಆರು ಕೋಟಿ ರೂಪಾಯಿ ಠೇವಣಿ ಇಟ್ಟಿದ್ದರು. ಅದರ ಮೇಲೆ ಪದೇಪದೇ ಸಾಲ ಪಡೆದು ಮರಳಿ ಕಟ್ಟದೆ ವಂಚಿಸಿದ್ದಾರೆ ಎಂದು ಹೇಳಲಾಗಿದೆ.
ಬ್ಯಾಂಕಿನ ಹಣ ವಂಚನೆ ಮಾಡಿದ್ದು ಸಂಸ್ಥೆಯವರಿಗೆ ಆರು ತಿಂಗಳ ಹಿಂದೆಯೇ ಗೊತ್ತಾಗಿದೆ. ಆಗಲೇ ದೂರು ಕೊಟ್ಟಿದ್ದರೆ ಹೆಚ್ಚಿನ ನಷ್ಟವನ್ನು ತಪ್ಪಿಸಬಹುದಾಗಿತ್ತು. ಆದರೆ ಅವರು ಸಂಸ್ಥೆಯೊಳಗೆ ಸಮಸ್ಯೆ ಬಗೆಹರಿಸಿಕೊಳ್ಳಲು ಪ್ರಯತ್ನಿಸಿದ್ದು ಅದು ಸಾಧ್ಯವಾಗದಿದ್ದಾಗ ಪೊಲೀಸ್ ಠಾಣೆಗೆ ಬಂದಿದ್ದಾರೆ. ಈ ಬೆಳವಣಿಗೆಯಿಂದ ಆರೋಪಿಗಳು ಪರಾರಿಯಾಗಿದ್ದಾರೆ.
ಆರು ಶಾಖೆಗಳನ್ನು ಹೊಂದಿರುವ ಮಹಾಲಕ್ಷ್ಮಿ ಅರ್ಬನ್ ಕೊ ಆಪರೇಟಿವ್ ಬ್ಯಾಂಕ್ ಗೆ 3000ಕ್ಕೂ ಹೆಚ್ಚು ಠೇವಣಿದಾರರಿದ್ದು, ಒಂದು ಬ್ಯಾಂಕ್ ಬ್ಯಾಂಕಿನ ಒಂದು ಶಾಖೆಯಲ್ಲಿ ಮಾತ್ರ ವಂಚನೆ ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ.