ಸಹಕಾರ ಸಂಘಗಳ ಮೂಲಕ ಜಾರಿಗೊಳಿಸಲಾಗಿದ್ದ ಯಶಸ್ವಿನಿ ಯೋಜನೆಯನ್ನು ಮತ್ತೆ ಜಾರಿಗೊಳಿಸಬೇಕೆಂಬ ಬೇಡಿಕೆ ಕೇಳಿಬಂದಿದೆ.
ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಮೂಲಕ ಉತ್ತಮ ಚಿಕಿತ್ಸೆ ಸೌಲಭ್ಯ ಸಿಗ್ತಿಲ್ಲ ಎಂಬ ಆರೋಪ ಕೇಳಿಬಂದಿದ್ದು, ರೈತರಿಗೆ ಅನುಕೂಲವಾಗುವಂತೆ ಯಶಸ್ವಿನಿ ಯೋಜನೆ ಮತ್ತೆ ಜಾರಿಗೊಳಿಸಬೇಕು ಎಂದು ಹೇಳಲಾಗಿದೆ.
ಸಹಕಾರ ಸಂಘಗಳ ಮೂಲಕ ಗ್ರಾಮೀಣ ಸದಸ್ಯರು ವಾರ್ಷಿಕ 300 ರೂ. ಮತ್ತು ನಗರಪ್ರದೇಶದ ಸದಸ್ಯರು 710 ವಂತಿಗೆ ಪಾವತಿಸಿ ಯಶಸ್ವಿನಿ ಯೋಜನೆಯ ಮೂಲಕ ನೋಂದಾಯಿತ ರಾಜ್ಯದ ಯಾವುದೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಈ ಯೋಜನೆಯಲ್ಲಿ ಅವ್ಯವಹಾರ ನಡೆದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಯಶಸ್ವಿನಿ ಯೋಜನೆ ಒಳಗೊಂಡಂತೆ ಎಲ್ಲಾ ಆರೋಗ್ಯಸೇವೆ ಯೋಜನೆ ರದ್ದು ಮಾಡಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯೊಂದಿಗೆ ವಿಲೀನಗೊಳಿಸಲಾಗಿದೆ.
ಯಶಸ್ವಿನಿ ಯೋಜನೆ ರದ್ದು ಮಾಡಿದ ವರ್ಷದಲ್ಲಿ ಸುಮಾರು 40 ಲಕ್ಷ ಫಲಾನುಭವಿಗಳು ನೋಂದಾಯಿಸಿದ್ದರು. ಅವರಲ್ಲಿ 1.65 ಲಕ್ಷ ಮಂದಿ ಸರ್ಜರಿ ಮಾಡಿಸಿಕೊಂಡಿದ್ದು, 2.20 ಲಕ್ಷ ಮಂದಿ ಚಿಕಿತ್ಸೆ ಪಡೆದುಕೊಂಡಿದ್ದರು. ಇನ್ನುಳಿದ 36 ಲಕ್ಷ ಜನ ಚಿಕಿತ್ಸೆ ಪಡೆದುಕೊಂಡಿರಲಿಲ್ಲ. ಇದರಿಂದ ದೊಡ್ಡ ಮೊತ್ತವೇ ಉಳಿತಾಯವಾಗಿದೆ. ಯೋಜನೆಯಲ್ಲಿ ಅವ್ಯವಹಾರವಾಗಿದ್ದರೆ ಅದನ್ನು ಸರಿಪಡಿಸಬೇಕು. ಆದರೆ, ಯೋಜನೆಯನ್ನೇ ರದ್ದುಪಡಿಸಿರುವುದು ಸರಿಯಲ್ಲ ಎಂಬ ಅಭಿಪ್ರಾಯ ಕೇಳಿಬಂದಿದೆ.
ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಚಿಕಿತ್ಸೆ ನೀಡುತ್ತಿದ್ದು, ಖಾಸಗಿ ಆಸ್ಪತ್ರೆಗಳಿಗೆ ರೆಫರಲ್ ಮಾಡುತ್ತಿಲ್ಲ. ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಆಪರೇಷನ್ ಥಿಯೇಟರ್ ಗಳ ಕೊರತೆ ಇದೆ. ಅಲ್ಲದೆ ಕಡಿಮೆ ಆಪರೇಷನ್ ಮಾಡುತ್ತಿದ್ದು, ಅಗತ್ಯವಿರುವವರಿಗೆ ಶೀಘ್ರವಾಗಿ ಚಿಕಿತ್ಸೆ, ಆಪರೇಷನ್ ಮತ್ತು ಹೃದ್ರೋಗ ಸಮಸ್ಯೆ ಇರುವವರಿಗೆ ಚಿಕಿತ್ಸೆ ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ. ಖಾಸಗಿ ಆಸ್ಪತ್ರೆಗಳಿಗೆ ರೆಪರೆಲ್ ಕೂಡ ಮಾಡುತ್ತಿಲ್ಲ. ಇವೆಲ್ಲ ಕಾರಣದಿಂದ ಯಶಸ್ವಿನಿ ಯೋಜನೆಯನ್ನು ಮತ್ತೆ ಜಾರಿಗೆ ತರಬೇಕೆಂದು ಹೇಳಲಾಗಿದೆ.