
ಬೆಂಗಳೂರು: ರಾಜ್ಯ ಸರ್ಕಾರದಿಂದ ಹಗಲು ವೇಳೆಯಲ್ಲಿ ನೀರಾವರಿ ಸೌಕರ್ಯ ಒದಗಿಸುವ ಮಹತ್ವಕಾಂಕ್ಷಿಯ ಸೋಲಾರ್ ಪಂಪ್ಸೆಟ್ ಯೋಜನೆ(ಕುಸುಮ್ –ಬಿ) ಜಾರಿಗೊಳಿಸಿದ್ದು, ಸಬ್ಸಿಡಿ ದರದಲ್ಲಿ ಸೌರ ಪಂಪ್ಸೆಟ್ ಪಡೆಯಲು ರೈತರಿಗೆ ಸುವರ್ಣ ಅವಕಾಶವಿದೆ.
2024 -25 ನೇ ಸಾಲಿನಲ್ಲಿ 40,000 ಸೌರ ಕೃಷಿ ಪಂಪ್ಸೆಟ್ ಅಳವಡಿಸುವ ಗುರಿ ಹೊಂದಲಾಗಿದೆ. 3 ಹೆಚ್.ಪಿ. ಯಿಂದ 10 ಹೆಚ್.ಪಿ. ವರೆಗಿನ ಸಾಮರ್ಥ್ಯದ ತೆರೆದ/ ಕೊರೆದ ಬಾವಿಗಳಿಗೆ ಸೌರ ಕೃಷಿ ಪಂಪ್ಸೆಟ್ ಅಳವಡಿಸಲು ಸಹಾಯಧನ ನೀಡಲಾಗುವುದು. ರೈತರ ಆರ್ಥಿಕ ಹೊರೆ ತಗ್ಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಹಾಯಧನವನ್ನು ಶೇಕಡ 30 ರಿಂದ ಶೇಕಡ 50ಕ್ಕೆ ಹೆಚ್ಚಿಸಿದೆ. ಕೇಂದ್ರ ಸರ್ಕಾರದಿಂದ ಶೇಕಡ 30ರಷ್ಟು ಸಹಾಯಧನ ದೊರೆಯಲಿದ್ದು, ರೈತರು ಕೇವಲ ಶೇಕಡ 20ರಷ್ಟು ವೆಚ್ಚ ಭರಿಸಬೇಕಿದೆ.
ಯೋಜನೆಯ ಸದುಪಯೋಗ ಪಡೆದುಕೊಳ್ಳಲು ರೈತರು ತಮ್ಮ ಅರ್ಜಿಗಳನ್ನು https://souramitra.com ಮೂಲಕ ನೋಂದಾಯಿಸಲು ಕೋರಲಾಗಿದೆ. ಹೆಚ್ಚಿನ ವಿವರಗಳಿಗಾಗಿ 080 22202100 ಸಂಪರ್ಕಿಸಬಹುದಾಗಿದೆ. ರೈತ ಬಾಂಧವರು ನಕಲಿ ಜಾಲತಾಣಗಳು ವಶೀಕರಗಳ ಬಗ್ಗೆ ಎಚ್ಚರ ವಹಿಸುವಂತೆ ಕೋರಲಾಗಿದೆ.