ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಉತ್ತಮ ಪಡೆದರೂ ಕೂಡ ಹಲವೆಡೆ ಮಳೆ ಸಕಾಲಕ್ಕೆ ಬಾರದೆ ಬಿತ್ತನೆ ಕಾರ್ಯಕ್ಕೆ ಹಿನ್ನಡೆಯಾಗಿದೆ. ಇದರೊಂದಿಗೆ ಕೃಷಿ ಚಟುವಟಿಕೆಗಳಿಗೂ ತೊಂದರೆಯಾಗಿದೆ.
ಸಕಾಲಕ್ಕೆ ಆರಂಭವಾದ ಮುಂಗಾರು ರೈತಾಪಿ ವರ್ಗದಲ್ಲಿ ಆಶಾಭಾವನೆ ಮೂಡಿಸಿದ್ದರಿಂದ ರಾಜ್ಯದ ಬಹುತೇಕ ಭಾಗದಲ್ಲಿ ಕೃಷಿ ಚಟುವಟಿಕೆ ಚುರುಕಾಗಿತ್ತು. ಆದರೆ, ಕಳೆದ ಒಂದು ವಾರದಿಂದ ಕೆಲವೆಡೆ ಉತ್ತಮ ಮಳೆಯಾಗಿದ್ದು ಮತ್ತೆ ಕೆಲವು ಕಡೆ ಸಕಾಲಕ್ಕೆ ಮಳೆಯಾಗದೆ ರೈತರು ಮುಗಿಲಿನತ್ತ ಮುಖ ಮಾಡುವಂತಾಗಿದೆ.
ಕೆಲವು ಜಿಲ್ಲೆಗಳಲ್ಲಿ ಮಳೆಗಾಲದಲ್ಲಿ ಬೇಸಿಗೆ ಬಿಸಿಲನ್ನು ನಾಚಿಸುವಂತಹ ಬಿಸಿಲು ಬೀಳುತ್ತಿದೆ. ಅನೇಕ ಜಿಲ್ಲೆಗಳಲ್ಲಿ ಮಳೆ ಕೊರತೆಯಿಂದಾಗಿ ಬಿತ್ತಿದ ಬೆಳೆಗಳು ಬಾಡತೊಡಗಿದೆ. ಸಕಾಲಕ್ಕೆ ಮಳೆಯಾಗದಿದ್ದರೆ ಬೆಳೆಗಳು ಒಣಗಬಹುದು ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಮೈಸೂರು, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಚಿಕ್ಕಬಳ್ಳಾಪುರ ಮೊದಲಾದ ಜಿಲ್ಲೆಗಳಲ್ಲಿ ಮಳೆ ಕೊರತೆಯಿಂದ ಬಿತ್ತಿದ ಬೆಳೆ ಬಾಡತೊಡಗಿವೆ. ಕೆಲವು ಕಡೆ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದರಿಂದ ಕೃಷಿ ಕಾರ್ಯಕ್ಕೆ ಹಿನ್ನಡೆಯಾಗಿದೆ. ಮತ್ತೆ ಕೆಲವು ಕಡೆ ಮಳೆ ಉತ್ತಮವಾಗಿದ್ದರೂ, ಸಕಾಲಕ್ಕೆ ಬಾರದೇ ಬಿತ್ತನೆ ಕುಂಠಿತಗೊಂಡಿದೆ ಎನ್ನಲಾಗಿದೆ.