ರಾಯಚೂರು: ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜಗಳನ್ನು ಚೀನಾ ಸೇರಿದಂತೆ ಇತರೆ ದೇಶಗಳಿಂದ ಕಳಿಸಲಾಗುತ್ತದೆ. ಈ ಬೀಜಗಳು ಕೀಟ ಮತ್ತು ರೋಗಗಳಿಂದ ಕೂಡಿದ್ದು, ಅವುಗಳನ್ನು ಬಿತ್ತನೆ ಮಾಡಿದ್ದಲ್ಲಿ ತಿಂಗಳಲ್ಲಿ ಬೆಳೆ ಸಂಪೂರ್ಣವಾಗಿ ನಾಶವಾಗುತ್ತದೆ. ಅನಾಮಧೇಯರಿಂದ ಬಿತ್ತನೆ ಬೀಜ ಬಂದರೆ ರೈತರು ಸ್ವೀಕರಿಸಬಾರದು ಎಂದು ಎಚ್ಚರಿಕೆ ನೀಡಲಾಗಿದೆ.
ಈಗಾಗಲೇ ಇಂಗ್ಲೆಂಡ್, ಕೆನಡಾದಿಂದ ಹಲವು ರೈತರಿಗೆ ಇಂತಹ ಬೀಜಗಳನ್ನು ಕಳಿಸಲಾಗಿರುತ್ತದೆ. ವಿವಿಧ ತಳಿಗಳ ಬಿತ್ತನೆ ಬೀಜದ ಪೊಟ್ಟಣಗಳನ್ನು ಯಾರು, ಎಲ್ಲಿಂದ ಕಳುಹಿಸುತ್ತಿದ್ದಾರೆ ಎಂಬ ವಿವರಗಳೇ ಇರುವುದಿಲ್ಲ, ಈ ಬೀಜಗಳ ಬಳಕೆಯಿಂದ ಕೃಷಿಯ ಮೇಲೆ ವ್ಯತಿರಿಕ್ತ ಪರಿಣಾಮವಾಗಲಿದ್ದು, ಭೂಮಿ ಬಂಜರಾಗುವ ಸಾಧ್ಯತೆಯೂ ಇದೆ.
ಇಂತಹ ಬಿತ್ತನೆಯ ಬೀಜದ ಪೊಟ್ಟಣಗಳ ಪಾರ್ಸಲ್ ಬಂದರೆ, ರೈತರು ವಾಪಸ್ ಕಳಿಸಬೇಕು, ಒಂದು ವೇಳೆ ಸ್ವೀಕರಿಸಿದರೂ ಪೊಟ್ಟಣದ ಸಮೇತ ಅದನ್ನು ಸುಟ್ಟುಹಾಕಬೇಕು, ಇಲ್ಲವೇ ಸಮೀಪದ ಕೃಷಿ ಇಲಾಖೆ ಅಧಿಕಾರಿಗಳಿಗೆ ಅಥವಾ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ. ಮಲ್ಲಿಕಾರ್ಜುನ ತಿಳಿಸಿದ್ದಾರೆ.