ಕಲಬುರಗಿ: 18 ಲಕ್ಷ ರೈತರಿಗೆ 500 ಕೋಟಿ ರೂ. ಬರ ಪರಿಹಾರ ವಿತರಣೆಗೆ ಸರ್ಕಾರ ಮುಂದಾಗಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು ಮಾತನಾಡಿ, ರಾಜ್ಯದಲ್ಲಿ ಕಳೆದ ವರ್ಷ ಬರಗಾಲದಿಂದ ಸಣ್ಣ, ಅತಿ ಸಣ್ಣ ರೈತರು ವಾರ್ಷಿಕ ಬೆಳೆ ನಷ್ಟದಿಂದ ಕಂಗಾಲಾಗಿದ್ದಾರೆ. ಅವರ ಜೀವನೋಪಾಯ ನಷ್ಟ ಭರಿಸಲು ಸುಮಾರು 18 ಲಕ್ಷ ರೈತರಿಗೆ ತಲಾ ಮೂರು ಸಾವಿರ ರೂಪಾಯಿಯಂತೆ 500 ಕೋಟಿ ರೂ. ಪರಿಹಾರ ವಿತರಣೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಮುಂದಿನ ಒಂದು ವಾರದಲ್ಲಿ ರೈತರ ಖಾತೆಗೆ ಹಣ ಜಮೆಯಾಗಲಿದೆ ಎಂದು ಹೇಳಿದ್ದಾರೆ.
ಕಳೆದ ವರ್ಷ ಬರಗಾಲವಿತ್ತು. ಕೇಂದ್ರ ಸರ್ಕಾರ ಕಾಲಮಿತಿಯಲ್ಲಿ ಪರಿಹಾರ ನೀಡದ ಕಾರಣ ರಾಜ್ಯ ಸರ್ಕಾರವೇ 40 ಲಕ್ಷ ರೈತರಿಗೆ SDRF ನಿಧಿಯಡಿ 2451 ಕೋಟಿ ರೂ. ಬರಗಾಲ ಪರಿಹಾರ ನೀಡಿದೆ ಎಂದು ಹೇಳಿದ್ದಾರೆ.