ಬಳ್ಳಾರಿ : ಮುಂಗಾರು ಬೆಳೆಗಳಿಗೆ ಮಳೆ ಕೊರತೆ ಹಿನ್ನಲೆಯಿಂದ ಆಗಬಹುದಾದ ಬೆಳೆ ಹಾನಿಗೆ ಸಂಬಂಧಿಸಿದಂತೆ ರೈತರು ತಮ್ಮ ಬೆಳೆಗಳಿಗೆ ಗ್ರಾಮಒನ್ ಸೇವಾ ಕೇಂದ್ರಗಳಲ್ಲಿ ವಿಮೆ ಮಾಡಿಸಿಕೊಂಡು ಸಮರ್ಪಕ ಪರಿಹಾರ ಪಡೆದುಕೊಳ್ಳಬಹುದು ಎಂದು ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರಾ ಅವರು ಹೇಳಿದರು.
ನಗರದ ಜಿಲ್ಲಾ ಪಂಚಾಯತ್‍ನ ನಜೀರ್ ಸಭಾಂಗಣದಲ್ಲಿ ಶುಕ್ರವಾರದಂದು ಜಿಲ್ಲೆಯ 5 ತಾಲೂಕಿನ ಗ್ರಾಮಒನ್ ಸೇವಾಕೇಂದ್ರಗಳ ನಿರ್ವಾಹಕರಿಗೆ ಹಮ್ಮಿಕೊಂಡಿದ್ದ ಗ್ರಾಮಒನ್ ಸಂರಕ್ಷಣಾ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಗ್ರಾಮಒನ್ ಕೇಂದ್ರ’ಗಳಲ್ಲೇ ಬೆಳೆ ವಿಮೆ ಯೋಜನೆಗೆ ನೋಂದಣಿ ಮಾಡಬಹುದು: ಬೆಳೆ ವಿಮೆ ಯೋಜನೆಯನ್ನು ಹತ್ತಿರದ ಬ್ಯಾಂಕುಗಳಲ್ಲಿ ಹಾಗೂ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಮಾತ್ರ ರೈತರು, ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ನೋಂದಣಿ ಮಾಡಿಕೊಳ್ಳಬಹುದಾಗಿತ್ತು. ಈಗ ಜಿಲ್ಲೆಯ ಎಲ್ಲಾ ಗ್ರಾಮಒನ್ ಕೇಂದ್ರಗಳಲ್ಲೂ ಬೆಳೆ ವಿಮೆ ನೊಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಆದ್ದರಿಂದ ಜಿಲ್ಲೆಯ 146 ಗ್ರಾಮಒನ್ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಬೆಳೆ ವಿಮೆ ಯೋಜನೆಯ ಮಾಹಿತಿ ನೀಡಲು ಹಾಗೂ ವಿಮೆ ನೋಂದಣಿ ಮಾಡಿಕೊಳ್ಳುವ ಕ್ರಮಗಳ ಕುರಿತು ತರಬೇತಿ ಆಯೋಜಿಸಲಾಗಿದೆ ಎಂದರು.
ಬೆಳೆ ವಿಮೆ ನೋಂದಣಿಗೆ ಅರಿವು ಮೂಡಿಸಿ: ಗ್ರಾಮ ಒನ್ ಸಿಬ್ಬಂದಿಗಳು ತರಬೇತಿ ಪಡೆಯುವ ಮೂಲಕ ಬೆಳೆ ವಿಮೆ ಯೋಜನೆ ಕುರಿತು ರೈತರಲ್ಲಿ ಅರಿವು ಮೂಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬೆಳೆ ವಿಮೆ ನೋಂದಣಿ ಮಾಡಿಕೊಳ್ಳಲು ಉತ್ತೇಜಿಸಬೇಕು. ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆ ವಿಮಾ ನೋಂದಣಿ ಮಾಡಿಕೊಳ್ಳುವ ಮೂಲಕ ಯೋಜನೆಯ ಸಂಪೂರ್ಣ ಲಾಭ ಪಡೆದುಕೊಳ್ಳುವಂತಾಗಬೇಕು ಎಂದು ಕರೆ ನೀಡಿದರು.
ಕೃಷಿ ಇಲಾಖೆಯ ಉಪನಿರ್ದೇಶಕ ಡಾ.ಕೆಂಗೇಗೌಡ ಅವರು ಮಾತನಾಡಿ, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯು ನಿಗದಿತ ಬೆಳಗಳ ನಷ್ಟಗಳಿಗೆ ಪರಿಹಾರ ಭರಿಸುವ ಹಾಗೂ ಆರ್ಥಿಕ ಚೇತರಿಕೆಯ ಮಾಧ್ಯಮವಾಗಿದೆ. ಇದರಿಂದ ರೈತರಿಗೆ ಅನಿರೀಕ್ಷಿತ ಅಥವಾ ಹವಾಮಾನ ಪರಿಸ್ಥಿತಿಗಳಿಂದ ಉಂಟಾದ ನಷ್ಟಕ್ಕೆ ರೈತರಿಗೆ ಪರಿಹಾರವನ್ನು ಒದಗಿಸಲಾಗುತ್ತದೆ ಎಂದರು.
ರೈತರು ಪಾವತಿಸಬೇಕಾದ ಪ್ರೀಮಿಯಂ ಮೊತ್ತ: ಮುಂಗಾರು ಬೆಳೆಗಳಿಗೆ ಬೆಳೆ ವಿಮೆ ನೋಂದಣಿಗಾಗಿ ವಿಮಾ ಮೊತ್ತದ ಶೇ.2 ರಷ್ಟು, ಹಿಂಗಾರು ಬೆಳೆಗಳಿಗೆ ಶೇ.1.5 ರಷ್ಟು ಮತ್ತು ವಾಣಿಜ್ಯ ಹಾಗೂ ತೋಟಗಾರಿಕಾ ಬೆಳೆಗಳಿಗೆ ವಿಮಾ ಮೊತ್ತದ ಶೇ.5 ರಷ್ಟು ಪ್ರೀಮಿಯಂ ಮೊತ್ತ ಪಾವತಿಸಬೇಕು ಎಂದು ತಿಳಿಸಿದರು.