ಬೆಂಗಳೂರು: ಪೆಸಿಫಿಕ್ ಮಹಾಸಾಗರದಲ್ಲಿ ಎಲ್ ನೀನೋ ಪರಿಸ್ಥಿತಿಯಿಂದಾಗಿ ರಾಜ್ಯ ಮತ್ತು ದೇಶದಲ್ಲಿ ಮುಂದಿನ ನಾಲ್ಕೈದು ವರ್ಷ ಮಳೆ ಕೊರತೆಯಾಗುವ ಸಂಭವವಿದ್ದು, ಪ್ರಮುಖ ಕೃಷಿ ವಿವಿಗಳು ರೈತರಿಗೆ ದೀರ್ಘಾವಧಿ ಬೆಳೆಗಳ ಬದಲು ಅಲ್ಪಾವಧಿ ಬೆಳೆಗಳತ್ತ ಗಮನಹರಿಸುವಂತೆ ಸಲಹೆ ನೀಡಿವೆ.
ಪೆಸಿಫಿಕ್ ಮಹಾಸಾಗರದಲ್ಲಿನ ಪರಿಸ್ಥಿತಿ ವಿಶ್ವದ ಅನೇಕ ಭಾಗಗಳಲ್ಲಿನ ಮಳೆಯ ಪ್ರಮಾಣ ನಿರ್ಧರಿಸುತ್ತದೆ. ಮಹಾಸಾಗರದ ಉಷ್ಣಾಂಶದಲ್ಲಿನ ವ್ಯತ್ಯಾಸದಿಂದ ಉಂಟಾಗುವ ಎಲ್ ನೀನೋ ಮತ್ತು ಲಾ ನೀನೋ ಪರಿಸ್ಥಿತಿಗಳು ಮಳೆ ಕೊರತೆ ತರಲಿವೆ. ಪೆಸಿಫಿಕ್ ಮಹಾಸಾಗರದಲ್ಲಿ ಉಷ್ಣಾಂಶ ಜಾಸ್ತಿಯಾಗಿ ಮಳೆಯ ಮಾರುತ ದಿಕ್ಕು ಬದಲಿಸುವ ಪರಿಸ್ಥಿತಿಯನ್ನು ಎಲ್ ನೀನೋ ಎಂದು ಕರೆಯಲಾಗುತ್ತದೆ ಈಗಿನ ಪರಿಸ್ಥಿತಿಯಲ್ಲಿ ಮಾರುತಗಳು ಅಮೆರಿಕ ಕಡೆಗೆ ತೆರಳಲಿದ್ದು, ಏಷ್ಯಾ ಮತ್ತು ಆಸ್ಟ್ರೇಲಿಯಾ ಭಾಗದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಲಿದೆ.
ಮುಂದಿನ ನಾಲ್ಕೈದು ವರ್ಷ ಲಾ ನೀನೋ ಪರಿಸ್ಥಿತಿ ಸೃಷ್ಟಿಯಾಗಿ ಉಷ್ಣಾಂಶ ಕಡಿಮೆಯಾದಾಗ ಮಳೆ ಮಾರುತಗಳು ಏಷ್ಯಾ ಮತ್ತು ಆಸ್ಟ್ರೇಲಿಯಾ ಭಾಗಕ್ಕೆ ಬರುತ್ತವೆ. ಈ ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ. ಜೂನ್, ಜುಲೈ ಮತ್ತು ಆಗಸ್ಟ್ ನಲ್ಲಿ ಶೇಕಡ 3 -4 ರಷ್ಟು ಕಡಿಮೆ ಮಳೆ ಆಗಲಿದ್ದು, ಸೆಪ್ಟಂಬರ್ ನಲ್ಲಿ ತೀರಾ ಕಡಿಮೆ ಮಳೆ ಆಗುವ ಸಾಧ್ಯತೆ ಇದೆ.
ಮಳೆ ಕೊರತೆಯ ಹಿನ್ನೆಲೆಯಲ್ಲಿ ಕೃಷಿ ವಿವಿಗಳು ರೈತರಿಗೆ ಅಲ್ಪಾವಧಿ ಬೆಳೆಗಳತ್ತ ಗಮನ ಸೆಳೆಯಲು ಮುಂದಾಗಿವೆ. ಮಲೆನಾಡು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಮಳೆ ಕೊರತೆ ಬಗ್ಗೆ ಮಾಹಿತಿ ನೀಡಲಾಗುತ್ತಿದ್ದು, ಅಲ್ಪಾವಧಿಯ ಸಿರಿಧಾನ್ಯಗಳ ಬೆಳೆಯುವತ್ತ ಗಮನಹರಿಸುವಂತೆ ರೈತರಿಗೆ ಸಲಹೆ ನೀಡಲಾಗುತ್ತಿದೆ.