ಬೆಂಗಳೂರು: ಜುಲೈ 16 ರಿಂದ ಪೌತಿಖಾತೆ ಅಭಿಯಾನ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೃತಪಟ್ಟ ರೈತರ ಹೆಸರಿನಲ್ಲಿರುವ ಭೂ ದಾಖಲೆಗಳನ್ನು ಅವರ ವಾರಸುದಾರರಿಗೆ ವರ್ಗಾವಣೆ ಮಾಡಲು ಜುಲೈ 16 ರಿಂದ ರಾಜ್ಯಾದ್ಯಂತ ಪೌತಿ ಖಾತೆ ಅಭಿಯಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಪೌತಿ ಖಾತೆ ವರ್ಗಾವಣೆಗೆ ಲಕ್ಷಾಂತರ ಅರ್ಜಿಗಳು ಬಾಕಿ ಉಳಿದಿದ್ದು, ಇವುಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಲು ಅಭಿಯಾನ ಹಮ್ಮಿಕೊಳ್ಳಲಾಗುವುದು. ಮೃತಪಟ್ಟ ವ್ಯಕ್ತಿಗಳ ಹೆಸರಿನಲ್ಲಿರುವ ಜಮೀನಿನ ದಾಖಲೆಗಳು ಅವರ ವಾರಸುದಾರರಿಗೆ ವರ್ಗಾವಣೆಯಾಗದಿರುವುದರಿಂದ ಸರ್ಕಾರದ ಸೌಲಭ್ಯಗಳನ್ನು ಈ ಕುಟುಂಬಗಳು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೃಷಿ ಸಂಬಂಧಿತ ಸಾಲಗಳನ್ನು ಕೂಡ ಪಡೆಯಲು ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪೌತಿ ಖಾತೆ ಅಭಿಯಾನ ಕೈಗೊಳ್ಳಲಾಗಿದೆ ಎಂದರು.
ಉಪವಿಭಾಗಾಧಿಕಾರಿಗಳಿಗೆ ಪೌತಿ ಖಾತೆ ವರ್ಗಾವಣೆ ಆದೇಶ ಹೊರಡಿಸುವ ಅಧಿಕಾರ ನೀಡಲಾಗುವುದು. ಮೃತಪಟ್ಟ ರೈತರ ಹೆಸರಿನಲ್ಲಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಸಂದರ್ಭದಲ್ಲಿ ಅವರ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳ ವಿವರಗಳನ್ನು ಖಚಿತಪಡಿಸಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.