ನವದೆಹಲಿ: ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ರೈತರು ಹೋರಾಟ ಮುಂದುವರಿಸಿದ್ದಾರೆ. ನಿನ್ನೆ ಹೋರಾಟ ನಿರತ ರೈತರೊಂದಿಗೆ ನಡೆದ ಸಂಧಾನ ಸಭೆ ವಿಫಲವಾಗಿದೆ. ಮತ್ತೊಮ್ಮೆ ಸಭೆ ನಡೆಸಲು ದಿನಾಂಕ ನಿಗದಿ ಮಾಡಲಾಗಿದೆ.
ರೈತರು ಕೃಷಿ ಕಾಯ್ದೆಯನ್ನು ರದ್ದು ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ. ಇದರೊಂದಿಗೆ 10ನೇ ಸಭೆಯು ವಿಫಲವಾಗಿದ್ದು ಜನವರಿ 22 ರಂದು ಮತ್ತೊಮ್ಮೆ ಸಭೆ ನಡೆಸಲಾಗುತ್ತದೆ. ದೆಹಲಿಯ ವಿಜ್ಞಾನ ಭವನದಲ್ಲಿ ರೈತ ಪ್ರತಿನಿಧಿಗಳು ಮತ್ತು ಸರ್ಕಾರದ ಪ್ರತಿನಿಧಿಗಳ ನಡುವೆ ಸುಮಾರು 5 ಗಂಟೆಗೂ ಅಧಿಕ ಕಾಲ ಸಭೆ ನಡೆದಿದೆ.
ಮೂರು ಕೃಷಿ ಕಾಯ್ದೆಗಳನ್ನು ಒಂದೂವರೆ ವರ್ಷ ರದ್ದುಮಾಡಿ ಜಂಟಿ ಸಮಿತಿ ರಚನೆ ಮಾಡುವ ಕುರಿತು ಸುಪ್ರೀಂ ಕೋರ್ಟ್ ನಲ್ಲಿ ಪ್ರಮಾಣ ಪತ್ರ ಸಲ್ಲಿಸಲು ಸರ್ಕಾರ ಪ್ರಸ್ತಾಪ ಇರಿಸಿದೆ ಎಂದು ರೈತ ಮುಖಂಡರು ತಿಳಿಸಿದ್ದಾರೆ. ಕೇಂದ್ರ ಸರ್ಕಾರ ರೈತರನ್ನು ದಿಕ್ಕು ತಪ್ಪಿಸಬಾರದು. ಕಾಯ್ದೆಗಳನ್ನು ಸಂಪೂರ್ಣವಾಗಿ ರದ್ದುಪಡಿಸಬೇಕೆಂಬುದು ರೈತರ ಬೇಡಿಕೆಯಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರೈತ ಸಂಘಟನೆಗಳು ಕಾಯ್ದೆ ತಡೆಹಿಡಿಯುವ ಪ್ರಸ್ತಾವವನ್ನು ಪರಿಗಣಿಸಿದ್ದು, ಬಿಕ್ಕಟ್ಟು ಕೊನೆಯಾಗುವ ಸುಳಿವು ಸಿಕ್ಕಿದೆ ಎಂದು ಹೇಳಿದ್ದಾರೆ.