ನವದೆಹಲಿ: ಧರಣಿಯಿಂದ ಹಿಂದೆ ಸರಿಯಲು ರೈತರು ನಾಳೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. 3 ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ದೆಹಲಿ ಗಡಿಭಾಗದಲ್ಲಿ ಒಂದೂವರೆ ವರ್ಷದಿಂದ ಹೋರಾಟ ಕೈಗೊಂಡಿದ್ದಾರೆ. ಕೇಂದ್ರದ ಮೂರು ಕೃಷಿ ಕಾಯ್ದೆ ವಾಪಸ್ ಪಡೆಯಲಾಗಿದ್ದು, ಸರ್ಕಾರ ಬೇಡಿಕೆ ಈಡೇರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ನಾಳೆ ಧರಣಿ ವಾಪಸ್ ಪಡೆಯುವ ಬಗ್ಗೆ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.
ನಾಳೆ ಮಧ್ಯಾಹ್ನ 2 ಗಂಟೆಗೆ ಸಿಂಘು ಗಡಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಯ ಸದಸ್ಯರ ಸಭೆ ನಡೆಯಲಿದ್ದು, ಸಭೆಯಲ್ಲಿ ಪ್ರತಿಭಟನೆ ವಾಪಸ್ ಪಡೆಯುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ.
ಕನಿಷ್ಠ ಬೆಂಬಲ ಬೆಲೆ ಮೇಲೆ ಖಾತ್ರಿ ನೀಡುವುದು, ವಿದ್ಯುತ್ ತಿದ್ದುಪಡಿ ಮಸೂದೆ ಕರಡು ಹಿಂಪಡೆಯುವುದು, ರೈತರ ಮೇಲಿನ ಕ್ರಿಮಿನಲ್ ಕೇಸ್ ವಾಪಸ್ ತೆಗೆದುಕೊಳ್ಳುವುದು, ಮೃತಪಟ್ಟ 700 ರೈತರಿಗೆ ಸಿಂಘು ಬಳಿ ಹುತಾತ್ಮರ ಸ್ಮಾರಕಕ್ಕೆ ಭೂಮಿ ನೀಡಬೇಕು, ಲಖಿಂಪುರ್ ಖೇರಿಯಲ್ಲಿ ಕಾರು ಹರಿಸಿ ಹತ್ಯೆ ಮಾಡಿದ ಪ್ರಕರಣದಲ್ಲಿ ಅಜಯ್ ಮಿಶ್ರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.