ಇಬ್ಬರು ರೈತರನ್ನು ಬಂಧಿಸಿರುವುದನ್ನು ವಿರೋಧಿಸಿ ಪ್ರತಿಭಟನೆಯಲ್ಲಿರುವ ಹರಿಯಾಣಾ ರೈತರು ತಮ್ಮೊಂದಿಗೆ ಧರಣಿಯಲ್ಲಿ ಭಾಗವಹಿಸಲು ಹಸುವೊಂದನ್ನು ಕರೆತಂದಿದ್ದಾರೆ.
ಇಲ್ಲಿನ ಫತೇಹಾಬಾದ್‌ನ ತೊಹಾನಾ ಪೊಲೀಸ್ ಠಾಣೆ ಮುಂದೆ ಧರಣಿ ಕುಳಿತಿರುವ ರೈತರು, ಆ ಇಬ್ಬರು ರೈತರನ್ನು ಬಂಧಿಸಿದ್ದನ್ನು ಕಂಡ 41ನೇ ಪ್ರತ್ಯಕ್ಷದರ್ಶಿ ಎಂದು ಹೇಳಿದ್ದಾರೆ.
ಇದರೊಂದಿಗೆ ಆ ಹಸುವಿಗೆ ನೀರು ಹಾಗೂ ಆಹಾರ ಒದಗಿಸುವುದು ಪೊಲೀಸರ ಹೊಣೆ ಎಂದು ರೈತರು ತಿಳಿಸಿದ್ದು, ಠಾಣೆಯ ಆವರಣದಲ್ಲಿರುವ ಸ್ಥಂಭವೊಂದಕ್ಕೆ ಹಸುವನ್ನು ಕಟ್ಟಿಹಾಕಿದ್ದು, ಅದಕ್ಕೆ ಹುಲ್ಲು ಹಾಗೂ ನೀರನ್ನು ಒದಗಿಸಲಾಗಿದೆ.
“ಪ್ರಸಕ್ತ ಸರ್ಕಾರ ತನ್ನನ್ನು ತಾನು ಗೋಭಕ್ತ ಎಂದು ಪರಿಗಣಿಸುತ್ತದೆ. ಹಾಗಾಗಿ, ಪವಿತ್ರ ಹಾಗೂ ಪರಿಶುದ್ಧದ ಸಂಕೇತವಾದ ಈ ಪವಿತ್ರ ಪ್ರಾಣಿಯನ್ನು ನಾವು ಸೂಚ್ಯವಾಗಿ ಕರೆತಂದಿದ್ದು, ಸರ್ಕಾರಕ್ಕೆ ಸ್ವಲ್ಪ ಪ್ರಜ್ಞೆ ಮೂಡಿಸಲು ಯತ್ನಿಸುತ್ತಿದ್ದೇವೆ” ಎಂದು ಪ್ರತಿಭಟನಾನಿರತ ರೈತರು ತಿಳಿಸಿದ್ದಾರೆ.
ಕೇಂದ್ರದ ಕೃಷಿ ಸುಧಾರಣಾ ಕಾಯಿದೆಗಳನ್ನು ವಿರೋಧಿಸಿ ಆಡಳಿತ ಒಕ್ಕೂಟದ ಪಕ್ಷ ಜೆಜೆಪಿಯ ಶಾಸಕ ದೇವೇಂದ್ರ ಸಿಂಗ್ ಬಬ್ಲಿ ಮನೆ ಮುಂದೆ ಧರಣಿ ಕುಳಿತಿದ್ದ ರೈತ ನಾಯಕರಾದ ವಿಕಾಸ್ ಸಿಸಾರ್ ಹಾಗೂ ರವಿ ಆಜಾದ್‌ರನ್ನು ಪೊಲೀಸರು ಬಂಧಿಸಿದ್ದರು. ಇದೇ ವೇಳೆ ಶಾಸಕರು ರೈತರ ವಿರುದ್ಧ ಅಸಭ್ಯವಾಗಿ ಮಾತನಾಡಿದ ಕಾರಣ ಆತನ ವಿರುದ್ಧ ಪ್ರಕರಣ ದಾಖಲಿಸಲು ಪ್ರತಿಭಟನಾ ನಿರತ ರೈತರು ಆಗ್ರಹಿಸಿದ್ದಾರೆ. ಇಬ್ಬರೂ ರೈತರನ್ನು ಭಾನುವಾರ ರಾತ್ರಿಯ ವೇಳೆ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.