ರೈತರ ದೆಹಲಿ ಚಲೋ ಪ್ರತಿಭಟನೆ ಮುಂದುವರೆದಿದೆ. ಹರಿಯಾಣದ ಶಂಭು ಗಡಿಯಲ್ಲಿ ನಿರ್ಮಿಸಲಾದ ಬಹು-ಪದರದ ಬ್ಯಾರಿಕೇಡ್ಗಳನ್ನು ಭೇದಿಸಲು ಯತ್ನಿಸಿದ ಪ್ರತಿಭಟನಾಕಾರರ ಚದುರಿಸಲು ಭದ್ರತಾ ಸಿಬ್ಬಂದಿ ಅಶ್ರುವಾಯು ಶೆಲ್ ಗಳನ್ನು ಬಳಸಿದ್ದಾರೆ.
101 ರೈತರ ಗುಂಪು ಭಾನುವಾರ ಮಧ್ಯಾಹ್ನ 12 ಗಂಟೆಯ ನಂತರ ಪಂಜಾಬ್-ಹರಿಯಾಣ ಗಡಿಯಲ್ಲಿರುವ ಶಂಭು ಪ್ರತಿಭಟನಾ ಸ್ಥಳದಿಂದ ದೆಹಲಿ ಕಡೆಗೆ ತಮ್ಮ ಪಾದಯಾತ್ರೆಯನ್ನು ಪುನರಾರಂಭಿಸಿತು, ಕನಿಷ್ಠ ಬೆಂಬಲ ಬೆಲೆ(MSP) ಗೆ ಕಾನೂನು ಖಾತರಿ ಸೇರಿದಂತೆ ಹಲವಾರು ಬೇಡಿಕೆಗಳಿಗಾಗಿ ಕೇಂದ್ರವನ್ನು ಒತ್ತಾಯಿಸಿ ಪ್ರತಿಭಟನೆ ಕೈಗೊಳ್ಳಲಾಗಿದೆ.
ಹರಿಯಾಣ ಪೊಲೀಸರು ಸ್ಥಾಪಿಸಿದ ಬ್ಯಾರಿಕೇಡ್ ಗಳಿಂದ ಕೆಲವೇ ಮೀಟರ್ಗಳ ಅಂತರದಲ್ಲಿ ರೈತರನ್ನು ನಿಲ್ಲಿಸಲಾಯಿತು. ಮೆರವಣಿಗೆಯನ್ನು ಮುಂದುವರಿಸಲು ಅಗತ್ಯ ಅನುಮತಿಯನ್ನು ತೋರಿಸಲು ಪೊಲೀಸರು ರೈತರನ್ನು ಕೇಳಿದರು.
ಜಿಲ್ಲೆಯಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಜನರನ್ನು ಅಕ್ರಮವಾಗಿ ಒಟ್ಟುಗೂಡಿಸುವುದನ್ನು ನಿಷೇಧಿಸುವ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್ಎಸ್ಎಸ್) ಸೆಕ್ಷನ್ 163 ರ ಅಡಿಯಲ್ಲಿ ಅಂಬಾಲ ಆಡಳಿತವು ವಿಧಿಸಿದ ನಿಷೇಧಾಜ್ಞೆಯಿಂದಾಗಿ ರೈತರು ಮುಂದುವರಿಯಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ರೈತರು ಬ್ಯಾರಿಕೇಡ್ ಭೇದಿಸಿ ಮುನ್ನಗ್ಗಲು ಯತ್ನಿಸಿದಾಗ ರೈತರನ್ನು ತಡೆದ ಭದ್ರತಾ ಸಿಬ್ಬಂದಿ ಅವರ ಮೇಲೆ ಅಶ್ರುವಾಯು ಸಿಡಿಸಿದ್ದಾರೆ.