ನವದೆಹಲಿ: ಕೃಷಿ ಕಾಯ್ದೆ ವಿರೋಧಿಸಿ ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ 32 ನೇ ದಿನಕ್ಕೆ ಕಾಲಿಟ್ಟಿದ್ದು, ಕೇಂದ್ರದ ಆಹ್ವಾನವನ್ನು ಮನ್ನಿಸಿದ ರೈತಸಂಘಟನೆಗಳು ಡಿಸೆಂಬರ್ 29 ರಂದು ಸಮಯ ನಿಗದಿ ಮಾಡಿವೆ.
ಸಂಧಾನಕ್ಕೆ ಸಿದ್ಧವಾಗಿದ್ದು, ಬೆಂಬಲ ಬೆಲೆ ವಿಚಾರ ಅಚಲವೆಂದು ರೈತ ನಾಯಕರು ಹೇಳಿದ್ದಾರೆ. ಕೊರೆಯುವ ಚಳಿಯನ್ನು ಲೆಕ್ಕಿಸದೇ ದೆಹಲಿ ಗಡಿಯಲ್ಲಿ ಹೋರಾಟ ನಡೆಸುತ್ತಿರುವ ಲಕ್ಷಾಂತರ ರೈತರು ಕೇಂದ್ರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಬಲ ಬೆಲೆ ರದ್ದು ಮಾಡುವುದಿಲ್ಲ, ಎಪಿಎಂಸಿ ವ್ಯವಸ್ಥೆ ಮುಂದುವರೆಯಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಕೃಷಿ ಕಾಯ್ದೆ ರದ್ದು ಮಾಡಬೇಕೆಂಬ ಪ್ರಮುಖ ಬೇಡಿಕೆಯೊಂದಿಗೆ ಡಿಸೆಂಬರ್ 29 ರಂದು ರೈತ ಸಂಘಟನೆಗಳ ಮುಖಂಡರು ಕೇಂದ್ರ ಸರ್ಕಾರದೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿದ್ದಾರೆ. ಸಭೆ ಫಲಪ್ರದವಾಗದಿದ್ದರೆ ಜನವರಿ 1 ರಿಂದ ಹೋರಾಟವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಲಾಗುವುದು ಎಂದು ಹೇಳಲಾಗಿದೆ.