ಬೆಂಗಳೂರು: ಮುಂಗಾರು ಆಗಮನ ವಿಳಂಬವಾಗಿದ್ದು, ರಾಜ್ಯದಲ್ಲಿ ಬಿತ್ತನೆ ಕಾರ್ಯ ಕೃಷಿ ಚಟುವಟಿಕೆಗಳಿಗೆ ಆರಂಭಿಕ ಹಿನ್ನಡೆಯಾಗಿದೆ.
ಕಳೆದ ವರ್ಷ ಈ ವೇಳೆಗೆ ಭರ್ಜರಿ ಮಳೆಯಾಗಿ ಬಿತ್ತನೆ ಕಾರ್ಯ ಬಿರುಸಿಗೊಂಡಿತ್ತು. ಈ ಬಾರಿ ಜೂನ್ ಎರಡನೇ ವಾರ ಕಳೆದರೂ ಮುಂಗಾರು ಚುರುಕುಗೊಂಡಿಲ್ಲ. ಖಾಸಗಿ ಹವಾಮಾನ ಮುನ್ಸೂಚನೆ ಸಂಸ್ಥೆ ಸ್ಕೈಮೇಟ್ ನೀಡಿರುವ ಮಾಹಿತಿಯಂತೆ ಮುಂದಿನ ನಾಲ್ಕು ವಾರ ಮುಂಗಾರು ದುರ್ಬಲವಾಗಲಿದೆ. ಇದರಿಂದಾಗಿ ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರಲಿದೆ.
ಈ ಬಾರಿ ಒಂದು ವಾರ ತಡವಾಗಿ ಜೂನ್ 8 ರಂದು ನೈರುತ್ಯ ಮುಂಗಾರು ಕೇರಳಕ್ಕೆ ಪ್ರವೇಶಿಸಿದ್ದರೂ, ಮುಂಗಾರು ಮಂದಗತಿಯಲ್ಲಿ ಇರುತ್ತದೆ ಎಂದು ಹೇಳಲಾಗಿದೆ. ಸಾಮಾನ್ಯವಾಗಿ ಜೂನ್ 15 ರ ವೇಳೆಗೆ ಕೇರಳ, ಕರ್ನಾಟಕ, ಮಹಾರಾಷ್ಟ್ರ ಭಾಗದಲ್ಲಿ ಮುಂಗಾರು ಮಳೆ ಆರ್ಭಟ ಶುರುವಾಗುತ್ತದೆ. ಆದರೆ, ಅಂತಹ ಲಕ್ಷಣಗಳು ಕಾಣಿಸುತ್ತಿಲ್ಲ. ಮಳೆ ಬಾರದೆ ಬಿತ್ತನೆ ಕಾರ್ಯಕ್ಕೆ ಭಾರಿ ಹಿನ್ನಡೆಯಾಗಿದೆ. ಕೆಲವು ಪ್ರದೇಶಗಳಲ್ಲಿ ಮಳೆಯಾಗಿ ಬಿತ್ತನೆ ಮಾಡಿದ್ದರೂ, ಮಳೆ ಇಲ್ಲದೆ ಬೀಜಗಳು ಮೊಳಕೆಯೊಡೆದಿಲ್ಲ. ಇದರಿಂದಾಗಿ ರೈತರು ಮಳೆಗಾಲಕ್ಕೆ ಎದುರು ನೋಡುತ್ತಿದ್ದಾರೆ.