
ಚಿಕ್ಕಬಳ್ಳಾಪುರ: 2022-23ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಮುಖ್ಯಮಂತ್ರಿಗಳು ಘೋಷಿಸಿರುವಂತೆ ರೈತರಿಗೆ ಕೃಷಿ ಯಂತ್ರೋಪಕರಣಗಳ ಬಳಕೆಯನ್ನು ಪ್ರೋತ್ಸಾಹಿಸಲು ಹಾಗೂ ಇಂದನ ವೆಚ್ಚದ ಭಾರವನ್ನು ಕಡಿಮೆ ಮಾಡಲು ಪ್ರತಿ ಎಕರೆಗೆ 250 ರೂ. ಗಳಂತೆ ಗರಿಷ್ಠ ಐದು ಎಕರೆಗೆ ಡೀಸೆಲ್ ಸಹಾಯಧನವನ್ನು ನೀಡಲು “ರೈತ ಶಕ್ತಿ” ಎಂಬ ಹೊಸ ಯೋಜನೆಯನ್ನು ಜಾರಿಗೆ ತಂದಿದೆ.
ರೈತ ಶಕ್ತಿ ಯೋಜನೆಯನ್ನು ಕೃಷಿ ಇಲಾಖೆಯ ಇತರೆ ಯೋಜನೆಗಳಂತೆ FRUITS(Farmer Registration and Unified Beneficiary Information System) ಗುರುತಿನ ಸಂಖ್ಯೆ ಬಳಸಿ ಕಿಸಾನ್ ತಂತ್ರಾಂಶ ಬಳಸಿ ನೇರ ನಗದು ವರ್ಗಾವಣೆ(DBT) ಮೂಲಕ ಅನುಷ್ಠಾನ ಮಾಡಲಾಗುವುದು.
FRUITS ಪೋರ್ಟಲ್ ನಲ್ಲಿ ನೋಂದಣಿಗೊಂಡ ಎಲ್ಲಾ ರೈತರು ಈ ಯೋಜನೆಯ ಫಲಾನುಭವಿಗಳಾಗಿರುತ್ತಾರೆ. ಈ ಯೋಜನೆಯ ಅರ್ಹತಾಧಾರಿತ ಯೋಜನೆಯಾಗಿರುವುದರಿಂದ ಯಾವುದೇ ರೈತರು ವೈಯಕ್ತಿಕ ಅರ್ಜಿ ಸಲ್ಲಿಸುವ ಅವಶ್ಯಕತೆಯಿರುವುದಿಲ್ಲ ದಾಖಲೆಗಳ ಪರಿಶೀಲನೆಯನ್ನು ಸರ್ಕಾರದ FRUITS ಪೋರ್ಟಲ್ ನಲ್ಲಿ ಲಭ್ಯವಿರುವ ದತ್ತಾಂಶಗಳ ಆಧಾರದ ಮೇಲೆ ಮಾಡುವುದು.
FRUITS ಪೋರ್ಟಲ್ ನಲ್ಲಿ ನಮೂದಿಸಿದ ಹಿಡುವಳಿಯ ವಿಸ್ತೀರ್ಣದ ಆಧಾರದ ಮೇಲೆ ರೈತರಿಗೆ ಡೀಸೆಲ್ ಸಹಾಯಧನವನ್ನು ನೇರ ನಗದು ವರ್ಗಾವಣೆ(DBT) ಮೂಲಕ ರೈತರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು. ಸಂಘ ಸಂಸ್ಥೆ/ಸ್ವ ಸಹಾಯ ಗುಂಪುಗಳು/ಟ್ರಸ್ಟ್ ಗಳ, ಸಂಸ್ಥೆಗಳ ಹೆಸರಿನಲ್ಲಿರುವ ಭೂ ಒಡೆತನಗಳಿಗೆ ಸಹಾಯಧನ ಒದಗಿಸಲು ಅವಕಾಶವಿರುವುದಿಲ್ಲ.
ಸದರಿ ಯೋಜನೆಯನ್ನು FRUITS ತಂತ್ರಾಂಶದಲ್ಲಿರುವ ವಿಸ್ತೀರ್ಣಕ್ಕಾನುಗುಣವಾಗಿ ಸಹಾಯಧನವನ್ನು ರೈತರಿಗೆ ನೇರ ನಗದು ವರ್ಗಾವಣೆ (DBT) ಮುಖಾಂತರ ಮಾಡಲಾಗುವುದರಿಂದ ರೈತ ಬಾಂದವರು ತಮ್ಮ ಒಡೆತನದಲ್ಲಿರುವ ಎಲ್ಲಾ ಭೂ ಹಿಡುವಳಿಗಳನ್ನು (ಸ.ನಂಗಳು) FRUITS ID ಯಲ್ಲಿ ದಿನಾಂಕ:20.08.2022 ರೊಳಗಾಗಿ ಸೇರ್ಪಡೆ ಮಾಡಿಕೊಳ್ಳುವುದು.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಧಿಕಾರಿಗಳು ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂರ್ಪಕಿಸಬಹುದೆಂದು ಚಿಕ್ಕಬಳ್ಳಾಪುರ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.