ಬೆಂಗಳೂರು: ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದರೂ ರೈತರ ಕೃಷಿ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ.
ರೈತರು ಪಡೆದ ಸಾಲವನ್ನು ನಿಗದಿತ ಅವಧಿಯೊಳಗೆ ಪಾವತಿಸಿದಲ್ಲಿ ಬಡ್ಡಿ, ಚಕ್ರ ಬಡ್ಡಿಯಿಂದ ರಿಯಾಯಿತಿ ಸಿಗಲಿದೆ. ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಕೊನೆ ದಿನಾಂಕ ವಿಸ್ತರಿಸುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಎಲ್ಲಾ ರೈತರು ಸಾಲ ಮರುಪಾವತಿಸಿದರೆ 540 ಕೋಟಿ ರೂಪಾಯಿ ಬೇಕಾಗುತ್ತದೆ. ಶೇಕಡ 50ರಷ್ಟು ರೈತರು ಮಾತ್ರ ಸಾಲ ಮರುಪಾವತಿಸುವ ಸಾಧ್ಯತೆ ಇದ್ದು, ಸರ್ಕಾರಕ್ಕೆ ಸುಮಾರು 200 ಕೋಟಿ ರೂ. ಹೊರೆಯಾಗಬಹುದೆಂದು ಅಂದಾಜಿಸಲಾಗಿದೆ ಎಂದು ಹೇಳಿದ್ದಾರೆ.
ಈ ಹಿಂದೆ ರೈತರ ಸಾಲ ಮನ್ನಾ ಮಾಡಿದ್ದರೂ ಸಂಪೂರ್ಣ ಜಾರಿಗೆ ಬಂದಿಲ್ಲ. ಅನೇಕ ಸಣ್ಣ ಮತ್ತು ಮಧ್ಯಮ ರೈತರು ಆಧಾರ್ ಜೋಡಣೆ ಮಾಡದಿರುವುದು, ಪಡಿತರ ಚೀಟಿ – ಆಧಾರ್ ಕಾರ್ಡ್ ಗೂ ತಾಳೆಯಾಗದ ಕಾರಣ ಸಾಲ ಮನ್ನಾದಡಿ ಸಹಕಾರ ಬ್ಯಾಂಕುಗಳಿಗೆ ಇನ್ನು 388 ಕೋಟಿ ರೂಪಾಯಿ ಪಾವತಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.