ಕಳೆದ ಬಾರಿ ಮುಂಗಾರುಪೂರ್ವ ಹಾಗೂ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ರಾಜ್ಯದೆಲ್ಲೆಡೆ ಬರಗಾಲ ಆವರಿಸಿತ್ತು. ಕೆರೆಕಟ್ಟೆಗಳು, ನದಿಗಳು ಬತ್ತಿ ಹೋದ ಪರಿಣಾಮ ತೋಟಗಾರಿಕಾ ಬೆಳೆಗಳನ್ನೂ ಸಹ ಉಳಿಸಿಕೊಳ್ಳುವುದು ಕಷ್ಟವಾಗಿತ್ತು. ಬೋರ್ವೆಲ್ ಗಳು ಸಹ ನೀರಿಲ್ಲದೆ ಬತ್ತಿ ಹೋದ ಪರಿಣಾಮ ಇದರ ಮೇಲೆ ಆಶ್ರಿತರಾಗಿ ಬೆಳೆ ಬೆಳೆದಿದ್ದವರು ಕಂಗಾಲಾಗಿದ್ದರು.
ಈ ಬಾರಿ ಮುಂಗಾರು ಪೂರ್ವ ಮಳೆ ರಾಜ್ಯದಲ್ಲಿ ವ್ಯಾಪಕವಾಗಿ ಸುರಿಯುತ್ತಿದೆ. ಅಲ್ಲದೆ ಮುಂಗಾರು ಸಹ ನಿಗದಿಯಂತೆ ಜೂನ್ 1 ರಂದೇ ಕೇರಳ ಪ್ರವೇಶಿಸಲಿದೆ. ಇದಾದ ಎರಡು ಮೂರು ದಿನಗಳಲ್ಲಿ ರಾಜ್ಯಕ್ಕೆ ಮುಂಗಾರು ಆಗಮಿಸಲಿದ್ದು, ಈ ಬಾರಿ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದರಿಂದ ರೈತರು ಸಂತಸಗೊಂಡಿದ್ದು, ಭೂಮಿಯನ್ನು ಹದ ಮಾಡುವ ನಿಟ್ಟಿನಲ್ಲಿ ಸಿದ್ಧತೆ ನಡೆಸಿದ್ದಾರೆ. ಈ ಬಾರಿ ವ್ಯಾಪಕ ಮಳೆಯಾಗಿ ಹಳ್ಳಕೊಳ್ಳಗಳು, ನದಿ, ಕೆರೆಕಟ್ಟೆಗಳು ತುಂಬಿದರೆ ಉತ್ತಮ ಬೆಳೆ ಬೆಳೆಯಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ಆದರೆ ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗುವುದು ಪ್ರತಿ ಬಾರಿಯೂ ಮರೀಚಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಬೆಲೆ ದೊರೆಯಬಹುದೆಂಬ ಆಶಾಭಾವನೆಯಲ್ಲಿ ರೈತರು ಇದ್ದಾರೆ.