ಬೆಂಗಳೂರು: ಹಳ್ಳಿಗಳಲ್ಲಿ ಒತ್ತುವರಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸದಿರಲು ಮಸೂದೆ ತರಲಾಗಿದೆ. ಮಹಾನಗರ ಪಾಲಿಕೆ ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಸರ್ಕಾರಿ ಭೂಮಿ ಒತ್ತುವರಿ ಪ್ರಕರಣಗಳನ್ನು ಕರ್ನಾಟಕ ಭೂಕಬಳಿಕೆ ನಿಷೇಧ ಕಾಯ್ದೆ ವ್ಯಾಪ್ತಿಯಿಂದ ಕೈ ಬಿಡಲು ರಾಜ್ಯ ಸರ್ಕಾರದಿಂದ ವಿಧಾನಸಭೆಯಲ್ಲಿ ಮಸೂದೆ ಮಂಡಿಸಲಾಗಿದೆ.
ಈ ಮಹತ್ವದ ಮಸೂದೆ ಅಂಗೀಕಾರವಾದಲ್ಲಿ ರೈತರು, ಕಾಫಿ ಬೆಳೆಗಾರರ ಮೇಲೆ ಭೂಕಬಳಿಕೆ ಆರೋಪದಡಿ ಕ್ರಿಮಿನಲ್ ಪ್ರಕರಣ ದಾಖಲಿಸುವುದು ನಿಲ್ಲಲಿದೆ. ಅಲ್ಲದೆ, ಆರೋಪಿತರು ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಅಲೆದಾಡುವುದು ಕೂಡ ತಪ್ಪಲಿದೆ.
ಮಹಾನಗರ ಪಾಲಿಕೆಗಳು, ಬಿಬಿಎಂಪಿ ವ್ಯಾಪ್ತಿಯಲ್ಲಿನ ಸರ್ಕಾರ, ಹಿಂದೂ ಧಾರ್ಮಿಕ ಸಂಸ್ಥೆಗಳು, ವಕ್ಫ್, ಸ್ಥಳೀಯ ಪ್ರಾಧಿಕಾರಗಳು, ಸರ್ಕಾರದ ಒಡೆತನ ನಿಯಂತ್ರಣ ವ್ಯವಸ್ಥೆಯಲ್ಲಿರುವ ಜಾಗದ ಒತ್ತುವರಿ ಹೊರತುಪಡಿಸಿ ಉಳಿದ ಪ್ರದೇಶದ ಒತ್ತುವರಿಗಳನ್ನು ಭೂಕಬಳಿಕೆ ನಿಷೇಧ ಕಾಯ್ದೆಯಿಂದ ಕೈ ಬಿಡಲಾಗಿದೆ.
ರಾಜ್ಯ ಸರ್ಕಾರ ಹೊಸದಾಗಿ ರೂಪಿಸುತ್ತಿರುವ ಕಾನೂನಿನ ಪ್ರಕಾರ ಒತ್ತುವರಿ ಜಮೀನನ್ನು ಒತ್ತುವರಿದಾರರಿಗೆ ಗುತ್ತಿಗೆ ನೀಡಲು ಕೂಡ ಅವಕಾಶವಿದೆ. ಇದರಿಂದ ರೈತರು, ಒತ್ತುವರಿದಾರರಿಗೆ ಕಿರುಕುಳ ತಪ್ಪಲಿದೆ ಎಂದು ಹೇಳಲಾಗಿದೆ.