ಬೆಂಗಳೂರು: ಜಮೀನು ಮಾರಾಟ ಮಾಡಿದ್ದರೂ ಅಕ್ರಮವಾಗಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಸಹಾಯಧನ ಪಡೆಯುತ್ತಿದ್ದ ರೈತರನ್ನು ಪತ್ತೆ ಮಾಡಿ ಹಣ ಪಾವತಿ ಸ್ಥಗಿತಗೊಳಿಸಲಾಗಿದೆ.
ಕೃಷಿ ಇಲಾಖೆ ಈ ರೀತಿಯ 1.50 ಲಕ್ಷ ರೈತರನ್ನು ಪತ್ತೆ ಮಾಡಿದೆ. ಇವರಲ್ಲದೆ ಮೃತಪಟ್ಟಿದ್ದ 200ಕ್ಕೂ ಅಧಿಕ ರೈತರ ಖಾತೆಗೆ ಪಾವತಿಯಾಗುತ್ತಿದ್ದ ಹಣಕ್ಕೆ ತಡೆ ನೀಡಲಾಗಿದೆ. ಇದುವರೆಗೆ ಸಂದಾಯವಾದ ಹಣ ವಸೂಲಿಗೆ ಕ್ರಮ ಕೈಗೊಳ್ಳಲಾಗುತ್ತಿದೆ.
ರಾಜ್ಯದಲ್ಲಿ ಸುಮಾರು 53 ಲಕ್ಷ ರೈತರು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಆದಾಯ ತೆರಿಗೆ ಪಾವತಿದಾರರು ಕೂಡ ಸೌಲಭ್ಯ ಪಡೆಯುತ್ತಿರುವುದನ್ನು ತಡೆಯುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದ್ದು, ಭೂಮಿ ತಂತ್ರಾಂಶ, ಫ್ರೂಟ್ಸ್ ಮೊದಲಾದ ದತ್ತಾಂಶಗಳನ್ನು ಆಧರಿಸಿ ಕೃಷಿ ಇಲಾಖೆ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಜಮೀನು ಮಾರಿದ ರೈತರು, ಮೃತಪಟ್ಟವರು ಸೇರಿದಂತೆ ಹೆಚ್ಚಿನ ಸಂಖ್ಯೆಯ ಅನರ್ಹರು ಕಿಸಾನ್ ಸಮ್ಮಾನ್ ಹಣ ಪಡೆಯುತ್ತಿರುವುದು ಗೊತ್ತಾಗಿದೆ. ಅಂತಹವರ ಖಾತೆಗೆ ಹಣ ಜಮಾ ಮಾಡುವುದನ್ನು ನಿಲ್ಲಿಸಿದ್ದು, ಹಣ ವಾಪಸ್ ಪಡೆಯಲು ಕ್ರಮಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.