ಮಂಡ್ಯ: ಇದೇ ಅಕ್ಟೋಬರ್ 18 ರಂದು ರೈತ ಮುಖಂಡರು, ಅಧಿಕಾರಿಗಳೊಂದಿಗೆ ಸಭೆ ನಡೆಸಿ ರೈತರ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಕ್ರಮವಹಿಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸಿ ನಾರಾಯಣಗೌಡ ಹೇಳಿದರು.
ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮೈಷುಗರ್ ಸಂಬಂಧ ರೈತರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಅ.18 ರಂದು ಸಭೆ ನಡೆಸಿ ಮೈಷುಗರ್ ಕಾರ್ಖಾನೆ, ಕಬ್ಬು ಬೆಳೆಗೆ ಬೆಲೆ ನಿಗದಿ ಹಾಗೂ ಇತರೆ ಸಮಸ್ಯೆಗಳ ಬಗ್ಗೆ ಚರ್ಚಿಸಿ ಕ್ರಮವಹಿಸುತ್ತೇವೆ. ಸಕ್ಕರೆ ಆಯುಕ್ತರು, ಸಕ್ಕರೆ ಮಂತ್ರಿ, ಸಕ್ಕರೆ ಕಾರ್ಖಾನೆಯ ಮಾಲೀಕರು ಎಲ್ಲರ ಸಮ್ಮುಖದಲ್ಲಿ ಚರ್ಚಿಸಲಾಗುವುದು ಎಂದರು.
ರೈತರ ಸಮಸ್ಯೆಗಳನ್ನು ಆಲಿಸಿ, ಪರಿಹರಿಸಲು ರೈತರಿಗಾಗಿ ಕಾಲ್ ಸೆಂಟರ್ ನ್ನು ಪ್ರಾರಂಭಿಸಿ, 24X7 ಕಾರ್ಯನಿರ್ವಹಿಸುವಂತೆ ಶೀಘ್ರದಲ್ಲೇ ಕ್ರಮವಹಿಸಲಾಗುವುದು. ಜಿಲ್ಲೆಯಲ್ಲಿ ಕಳಪೆ ರಸಗೊಬ್ಬರ ಮಾರಾಟ ಸಂಬಂಧ ರಸಗೊಬ್ಬರ ಮಾರಾಟ ಮಳಿಗೆಗಳಿಗೆ ದಾಳಿ ನಡೆಸಿ ಪರವಾನಗಿ ರದ್ದುಗೊಳಿಸಿ ಕ್ರಮವಹಿಸಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಇನ್ನು ರೈತರ ಸಮಸ್ಯೆಗಳನ್ನು ಬಗೆಹರಿಸಲು ಪ್ರತ್ಯೇಕವಾಗಿ 3 ತಿಂಗಳಿಗೊಮ್ಮೆ ಸಭೆ ನಡೆಸಲು ಕ್ರಮವಹಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಅಕ್ಟೋಬರ್ 18 ರಂದು ರೈತರ ಸಮಸ್ಯೆಗಳನ್ನು ಬಗೆಹರಿಸಲು ಸಭೆ ನಡೆಸಲು ತೀರ್ಮಾನ ಕೈಗೊಂಡಿರುವುದರಿಂದ ರೈತ ಸಂಘದ ರಾಜ್ಯಾಧ್ಯಕ್ಷರು ಮೈಶುಗರ್ ಕಾರ್ಖಾನೆ ಹಾಗೂ ರೈತರ ಇನ್ನಿತರ ಸಮಸ್ಯೆಗಳ ಸಂಬಂಧ ವಿಶ್ವೇಶ್ವರಯ್ಯ ಪ್ರತಿಮೆ ಮುಂದೆ ಕೈಗೊಂಡಿರುವ ಪ್ರತಿಭಟನೆಯನ್ನು ತಾತ್ಕಾಲಿಕ ವಾಗಿ ಸ್ಥಗಿತಗೊಳಿಸಿದ್ದೇವೆ ಎಂದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಟಿ ಶ್ರೀಕಂಠೇಗೌಡ, ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರದ ನಾಗೇಂದ್ರ, ಮಂಡ್ಯ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆಂಪುಗೌಡ, ಅಪರ ಜಿಲ್ಲಾಧಿಕಾರಿ ಶೈಲಜಾ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಚಂದ್ರಶೇಖರ್, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪ ನಿರ್ದೇಶಕರಾದ ಸೌಮ್ಯ, ಉಪವಿಭಾಗಾಧಿಕಾರಿ ಐಶ್ವರ್ಯ, ತಹಶೀಲ್ದಾರ್ ಚಂದ್ರಶೇಖರ್ ಶಂ ಗಾಲಿ, ಹಾಗೂ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ರೈತ ಮುಖಂಡರು ಇದ್ದರು.