ಬಳ್ಳಾರಿ: ತೋಟಗಾರಿಕೆ ಇಲಾಖೆ ವತಿಯಿಂದ 2020-21 ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿರುವ ಮತ್ತು ಬೆಳೆಯಲು ಆಸಕ್ತಿ ಹೊಂದಿರುವ ರೈತರು ತಮ್ಮ ಬೆಳೆಗಳಿಗೆ ಹನಿ ನೀರಾವರಿ ಉಪಕರಣಗಳನ್ನು ಅಳವಡಿಸಿಕೊಳ್ಳಲು ಸಹಾಯ ಧನಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಬಹುವಾರ್ಷಿಕ ಹೆಚ್ಚಿನ ಅಂತರದ ಬೆಳೆಗಳಿಗೆ ಕನಿಷ್ಠ 1 ಎಕರೆಯಿಂದ 12.5 ಎಕರೆ 0.40 ಹೆಕ್ಟರ್ ನಿಂದ ಗರಿಷ್ಠ 5 ಹೆಕ್ಟರ್ ವರೆಗೆ ಹನಿ ನೀರಾವರಿ ಯೋಜನೆಯಡಿ ಸಹಾಯಧನವನ್ನು ಪಡೆಯಬಹುದಾಗಿದೆ. ಪ್ರಥಮ ಆದ್ಯತೆಯಾಗಿ ಕನಿಷ್ಠ 2 ಹೆಕ್ಟರ್ ವರೆಗೂ ಶೇಕಡ 90 ರಷ್ಟು ಸಹಾಯಧನ ಹಾಗೂ ಬಾಕಿ ಉಳಿದ 3 ಹೆಕ್ಟರ್ ಗೆ ಶೇಕಡ 45 ರಷ್ಟು ಸಹಾಯಧನ ನೀಡಲಾಗುತ್ತದೆ. ಕಡಿಮೆ ಅಂತರದ ಬೆಳೆಗಳಾದ ತರಕಾರಿ ಮತ್ತು ಹೂವಿನ ಬೆಳೆಗಳಿಗೆ ಗರಿಷ್ಟ 2 ಹೆಕ್ಟರ್ ವರೆಗೆ ಶೇಕಡ 90 ರಷ್ಟು ಸಹಾಯಧನ ನೀಡಲಾಗುವುದು.
ಜ.28 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಹೇಳಲಾಗಿದೆ.