alex Certify ರೈತರಿಗೆ ಶೀಘ್ರವೇ ಬೆಳೆ ಪರಿಹಾರ: ಯಾವುದೇ ಕಾರಣಕ್ಕೂ ರಾಜೀ ಇಲ್ಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರಿಗೆ ಶೀಘ್ರವೇ ಬೆಳೆ ಪರಿಹಾರ: ಯಾವುದೇ ಕಾರಣಕ್ಕೂ ರಾಜೀ ಇಲ್ಲ

ಬೆಂಗಳೂರು: ರೈತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ವಿಮಾ ಪರಿಹಾರ ಕಂಪನಿಗಳ ವಿಷಯದಲ್ಲಾಗಲೀ ಬೇರೆ ಯಾವುದೇ ವಿಚಾರದಲ್ಲಾಗಲೀ ಯಾರಿಂದಲೂ ಯಾವುದೇ ರೀತಿಯ ರಾಜೀಯೂ ಇಲ್ಲ, ಮುಲಾಜೂ ಇಲ್ಲ. ರೈತರ ಕಾಳಜಿಯೇ ಮುಖ್ಯವಾದ ಗುರಿಯಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ್ ಖೂಬಾ ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಕರ್ನಾಟಕ ರಾಜ್ಯದ ಕೃಷಿ ಸಚಿವರು, ಇಲಾಖಾಧಿಕಾರಿಗಳೊಂದಿಗೆ ಪ್ರಧಾನ್ ಮಂತ್ರಿ ಫಸಲ್ ಬಿಮಾ ಯೋಜನೆ ಸೇರಿದಂತೆ ಮತ್ತಿತರ ವಿಚಾರಗಳ ಬಗ್ಗೆ ಕೇಂದ್ರ ಸಚಿವರು ಅವಲೋಕನಾ ಸಭೆ ನಡೆಸಿ, ಸರ್ಕಾರಿ ಇನ್ಸೂರೆನ್ಸ್ ಕಂಪನಿಗಳು ಸರಿಯಾದ ಸಮಯಕ್ಕೆ ರೈತರಿಗೆ ಬೆಳೆ ವಿಮೆ ಪರಿಹಾರ ನೀಡಬೇಕೆಂಬ ನಿಟ್ಟಿನಲ್ಲಿ ಚರ್ಚಿಸಿದರು.

ಅವಲೋಕನಾ ಸಭೆಯಲ್ಲಿ ಸರ್ಕಾರಿ ವಿಮಾ ಕಂಪನಿಗಳಿಂದ ಸರಿಯಾದ ಸಮಯಕ್ಕೆ ಸರಿಯಾಗಿ ರೈತರಿಗೆ ಬೆಳೆ ವಿಮೆ ನೀಡಲು ಸಾಧ್ಯವಾಗುತ್ತದೆ ಎಂದ ಮೇಲೆ ಖಾಸಗಿ ವಿಮಾ ಕಂಪನಿಗಳಿಗೆ ಸರಿಯಾಗಿ ರೈತರಿಗೆ ವಿಮೆ ಪಾವತಿಸಲು ಸಾಧ್ಯವಾಗದೇ ಇರುವುದನ್ನು ಗಮನಿಸಿದ ಸಚಿವದ್ವಯರು ಸಭೆಯಲ್ಲಿ ಖಾಸಗಿ ವಿಮಾ ಕಂಪೆನಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೇವಲ ಅಂಕಿಅಂಶಗಳಿಂದ ಕಾಗದದ ಮೇಲಿನ ಅಂಕಿಸಂಖ್ಯೆಗಳಿಂದ ರೈತರಿಗೆ ನ್ಯಾಯ ಒದಗಿಸಲು ಸಾಧ್ಯವಿಲ್ಲ. ಸರ್ಕಾರಿ ವಿಮಾ ಕಂಪನಿಗಳು ಸರಿಯಾಗಿ ನ್ಯಾಯ ಒದಗಿಸುತ್ತಿವೆ. ಖಾಸಗಿ ಕಂಪನಿಗಳು ಕೇವಲ ಅಂಕಿಸಂಖ್ಯೆಗಳನ್ನು ಮಾತ್ರ ಅಧಿಕಾರಿಗಳಿಗೆ ತೋರಿಸುತ್ತಿವೆ. ಈ ಹಿಂದೆಯೇ ರೈತ ಸಂಪರ್ಕ ಕೇಂದ್ರಗಳಲ್ಲಿ ವಿಮಾ ಕಂಪೆನಿಗಳು ಕಚೇರಿಗಳನ್ನು ತೆರೆಯಬೇಕೆಂದು ಸೂಚಿಸಲಾಗಿತ್ತು. ಆದರೆ ಅದು ಬರೀ ಸೂಚನೆಯಾಗಿಯಷ್ಟೇ ಉಳಿದಿದ್ದು, ಕಾರ್ಯಗತವಾಗಿಲ್ಲ ಎಂಬುದನ್ನು ಸಭೆಯಲ್ಲಿ ಕಮಿಷನರ್ ಗಮನಕ್ಕೆ ತಂದ ಕೃಷಿ ಸಚಿವ ಬಿ.ಸಿ.ಪಾಟೀಲ್, ಈ ಬಗ್ಗೆ ಕೃಷಿ ಕೇಂದ್ರ ಇಲಾಖೆಯ ಪ್ರಮುಖರು ಗಮನ ಹರಿಸಿ 15 ದಿನದೊಳಗೆ ಎಲ್ಲಾ ವಿಮಾ ಕಂಪೆನಿಗಳಿಗೆ ತಾಕೀತು ಮಾಡುವಂತೆ ಹೇಳಿದರು.

ರೈತರ ಪರವಾಗಿ ಅಧಿಕಾರಿಗಳು ಇರಬೇಕು. ಜಿಲ್ಲೆಯ ಕೃಷಿ ಅಧಿಕಾರಿಗಳಲ್ಲಿ ಪರಸ್ಪರ ಸಮನ್ವಯತೆ ಇರಬೇಕು. ವಿಮಾ ಕಂಪನಿಯಲ್ಲಿ ಬೆಳೆ ವಿಮೆಗೆ ನೋಂದಣಿಯಾಗಿರುವ ಜಿಲ್ಲಾವಾರು ಪ್ರದೇಶ, ಬೆಳೆಗಳ ಬಗ್ಗೆ ರೈತರ ಮಾಹಿತಿ ಪಡೆದು ಸಾಂಖ್ಯಿಕ ಇಲಾಖೆಯ ಅಂಕಿಅಂಶಗಳ ಜೊತೆ ಪರಿಶೀಲನೆ ಮಾಡಿ ಒಂದು ವಾರದೊಳಗೆ ವರದಿ ಮಾಹಿತಿ ನೀಡಬೇಕು ಎಂದು ಆಯುಕ್ತರಿಗೆ ಭಗವಂತ್ ಖೂಬಾ ಸೂಚಿಸಿದರು.

ಈ ಸಂದರ್ಭದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಕೇಂದ್ರ ಸಚಿವ ಭಗವಂತ್ ಖೂಬಾಗೆ ಬೆಲೆ ಭದ್ರತೆ ಬಗ್ಗೆ ಮನವಿ ಸಲ್ಲಿಸಿದರು. ಸದ್ಯ ರಾಜ್ಯದಲ್ಲಿ 6.12 ಲಕ್ಷ ಟನ್ ವಿವಿಧ ಗ್ರೇಡ್ ಗಳ ರಸಗೊಬ್ಬರ ದಾಸ್ತಾನಿದ್ದು, 2022 ರ ಮುಂಗಾರಿಗೆ 26.5 ಲಕ್ಷ ಟನ್ ಬೇಡಿಕೆಯಿರುವುದಾಗಿ ಅಂದಾಜಿಸಲಾಗಿದೆ. ಅಗತ್ಯವಿರುವ ರಸಗೊಬ್ಬರದ ಸರಬರಾಜು ಹಾಗೂ 3 ಲಕ್ಷ ಟನ್ ವಿವಿಧ ರಸಗೊಬ್ಬರಗಳನ್ನು ಕಾಪು ದಾಸ್ತಾನಾಗಿ ಶೇಕರಣೆ ಮಾಡಲು ನಿರ್ಧರಿಸಲಾಗಿರುವುದರಿಂದ ಮುಂದಿನ ದಿನಗಳಲ್ಲಿ ಆಗಬಹುದಾದ ಬೆಲೆ ಏರಿಳಿತಕ್ಕೆ ರಕ್ಷಣೆ ನೀಡಲು ಮನವಿ ಪತ್ರದಲ್ಲಿ ಕೋರಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...