ಕೋತಿಗಳ ಚೇಷ್ಟೆಯಿಂದ ಬೆಳೆ ರಕ್ಷಣೆ ಮಾಡಲು ಉತ್ತರ ಪ್ರದೇಶದ ರೈತರು ವಿನೂತನ ಐಡಿಯಾವೊಂದನ್ನು ಹುಡುಕಿದ್ದಾರೆ. ಕರಡಿಗಳ ವೇಷದಲ್ಲಿ ಹೊಲಗದ್ದೆಗಳಿಗೆ ಹೋಗುವ ಮೂಲಕ ಕೋತಿಗಳನ್ನು ಅತ್ತ ಬಾರದಂತೆ ಬೆದರಿಸಲು ರೈತರು ಮುಂದಾಗಿದ್ದಾರೆ.
ದಿನೇ ದಿನೇ ಅರಣ್ಯ ಸಂಪತ್ತು ಕ್ಷೀಣಿಸುತ್ತಿರುವುದು ಹಾಗೂ ಆವಾಸ ಸ್ಥಾನಗಳ ವಿನಾಶದಿಂದಾಗಿ ಕೋತಿಗಳು ಇದೀಗ ಕೃಷಿ ಭೂಮಿಗಳನ್ನೇ ಆಹಾರ ಪೂರೈಕೆಯ ಮೂಲಗಳನ್ನಾಗಿ ಮಾಡಿಕೊಂಡಿವೆ. ಇದರಿಂದಾಗಿ ರೈತರಿಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗುತ್ತಿದೆ.
ರಾಜ್ಯದ ಲಖಿಂಪುರ ಖೇರಿಯ ಜಹಾನ್ ನಗರ ಗ್ರಾಮದ ರೈತರು ಹೀಗೆ ಕರಡಿ ಗೆಟಪ್‌ನಲ್ಲಿ ಬಂದು ತಂತಮ್ಮ ಕಬ್ಬಿನ ಗದ್ದೆಗಳನ್ನು ಕಾಯುತ್ತಿದ್ದಾರೆ. “ಈ ಪ್ರದೇಶದಲ್ಲಿ 40 – 45 ಕೋತಿಗಳು ಅಡ್ಡಾಡುತ್ತಾ ಬೆಳೆಹಾನಿಗೆ ಮುಂದಾಗಿವೆ. ಸಂಬಂಧಪಟ್ಟ ಪದಾಧಿಕಾರಿಗಳಿಗೆ ಈ ಸಂಬಂಧ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ನಾವು ತಲಾ 4,000 ರೂ. ಕೊಟ್ಟು ಈ ವೇಷಗಳನ್ನು ಖರೀದಿಸಿ ಬೆಳೆ ರಕ್ಷಣೆಗೆ ಮುಂದಾಗಿದ್ದೇವೆ,” ಎಂದು ರೈತ ಗಜೇಂದ್ರ ಸಿಂಗ್ ತಿಳಿಸುತ್ತಾರೆ.