ಕೃಷಿ ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್, ನಿಮಗೆ ಪ್ರತಿಭಟನೆ ಮಾಡಲು ಹಕ್ಕಿದೆ, ಹಾಗೆಂದ ಮಾತ್ರಕ್ಕೆ ರಸ್ತೆ ತಡೆ ಮಾಡಲು ನಿಮಗೆ ಅಧಿಕಾರವಿಲ್ಲ ಎಂದು ಹೇಳಿದೆ.
ಕೃಷಿ ಸಂಘಟನೆಗಳಿಗೆ ಸುಪ್ರೀಂ ಕೋರ್ಟ್ ಮೂರು ವಾರಗಳ ಗಡುವನ್ನು ನೀಡಿದೆ. ದೆಹಲಿಯ ವಿವಿಧ ಭಾಗಗಳಲ್ಲಿ ರೈತ ಸಂಘಟನೆಗಳು ಸುಮಾರು 1 ವರ್ಷಗಳಿಂದ ಪ್ರತಿಭಟನೆಯನ್ನು ಮುಂದುವರಿಸಿವೆ. ಪ್ರತಿಭಟನಾಕಾರರು ರಸ್ತೆ ತಡೆ ಮಾಡುವುದನ್ನು ನಿಲ್ಲಿಸಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಂದಿನ ವಿಚಾರಣೆಯನ್ನು ಡಿಸೆಂಬರ್ 7ಕ್ಕೆ ಮುಂದೂಡಿದೆ.
ನೋಯ್ಡಾದ ನಿವಾಸಿಯೊಬ್ಬರು ಸಲ್ಲಿಸಿದ ಅರ್ಜಿ ಇದಾಗಿದ್ದು, ರಾಷ್ಟ್ರ ರಾಜಧಾನಿಯ ಹೆದ್ದಾರಿಗಳಲ್ಲಿ ಪ್ರತಿಭಟನಾಕಾರರನ್ನು ತೆರವುಗೊಳಿಸುವಂತೆ ಮನವಿ ಮಾಡಿದ್ದರು.
ಇದಕ್ಕೊಂದು ಪರಿಹಾರವನ್ನು ನಾವು ಕಂಡುಹಿಡಿಯಲೇಬೇಕಿದೆ. ನಾವು ರೈತರ ಪ್ರತಿಭಟಿಸುವ ಹಕ್ಕನ್ನು ವಿರೋಧಿಸುತ್ತಿಲ್ಲ. ಆದರೆ ಅವರು ರಸ್ತೆಗಳನ್ನು ನಿರ್ಬಂಧಿಸುವುದು ಕಾನೂನು ಪ್ರಕಾರವಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಈ ಹಿಂದೆ ಕೂಡ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ವೇಳೆ ರಾಷ್ಟ್ರ ರಾಜಧಾನಿಗೆ ನೆರೆಯ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳನ್ನು ರೈತರು ತಡೆದಿದ್ದಾಗ, ರಸ್ತೆಗಳನ್ನು ಶಾಶ್ವತವಾಗಿ ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.