ಬೆಂಗಳೂರು: ರಾಜ್ಯ ಸರ್ಕಾರ ಪೌತಿ ಖಾತೆ ಬದಲಾವಣೆಗೆ ಸರಳ ನಿಯಮ ರೂಪಿಸಿ ಆಂದೋಲನ ರೂಪದಲ್ಲಿ ಪೌತಿ ಖಾತೆ ಬದಲಾವಣೆಗೆ ಮುಂದಾಗಿದೆ.
ವ್ಯಕ್ತಿ ಮರಣ ಹೊಂದಿದ ನಂತರ ವಾರಸುದಾರರ ಹೆಸರಿಗೆ ಜಮೀನಿನ ಖಾತೆ ಬದಲಾವಣೆಗಾಗಿ ಸಾಕಷ್ಟು ಸಮಯ ಕಾಯುವಂತಾಗಿದೆ. ಇಂಥವರಿಗೆ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ಪೌತಿ ಖಾತೆ ಬದಲಾವಣೆ ನಿಯಮ ಸಡಿಲಗೊಳಿಸಿ ಪರಿಹಾರ ಮತ್ತು ಭೂಮಿ ತಂತ್ರಾಂಶದಲ್ಲಿ ಬಾಕಿ ಇರುವ ಸುಮಾರು 2.71 ಲಕ್ಷಕ್ಕೂ ಅಧಿಕ ಪ್ರಕರಣಗಳನ್ನು ಆಂದೋಲನ ಮಾದರಿಯಲ್ಲಿ ಇತ್ಯರ್ಥಪಡಿಸಲಾಗುವುದು ಎನ್ನಲಾಗಿದೆ.
ಮರಣ ಹೊಂದಿದವರ ಮರಣ ಪ್ರಮಾಣಪತ್ರ ಮತ್ತು ವಾರಸುದಾರರ ವಂಶವೃಕ್ಷ ಪಡೆದು ಭೂಮಿ ತಂತ್ರಾಂಶದಲ್ಲಿ ಪೌತಿ ಖಾತೆ ನಮೂನೆ ಒಂದರಲ್ಲಿ ದಾಖಲಿಸಲಾಗುತ್ತದೆ. ಅರ್ಜಿದಾರರ ಮಾಹಿತಿಯನ್ನು ಅಟಲ್ ಜೀ ಜನಸ್ನೇಹಿ ಕೇಂದ್ರದಲ್ಲಿ ದಾಖಲಿಸುವುದು. ಕೃಷಿಯ ಜಮೀನಿನ ಮಾಲೀಕರು ನಿಧನರಾದ ನಂತರ ಪೌತಿ ಖಾತೆ ಉತ್ತರಾಧಿಕಾರಿ ಹೆಸರಿಗೆ ಬದಲಾವಣೆ ಆಗದಿದ್ದಲ್ಲಿ ಬ್ಯಾಂಕ್ ಸಾಲ ಪಡೆಯಲು, ಜಮೀನು ಅಭಿವೃದ್ಧಿಪಡಿಸಲು ಹಾಗೂ ಪರಿಹಾರ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ರೈತರಿಗೆ ಅನುಕೂಲವಾಗುವಂತೆ ಪೌತಿ ಖಾತೆ ಬದಲಾವಣೆಗೆ ಕ್ರಮ ಕೈಗೊಳ್ಳಲಾಗಿದೆ.
ಪೌತಿ ಖಾತೆ ಬದಲಾವಣೆಯ ಮ್ಯುಟೇಷನ್ ಶುಲ್ಕದಲ್ಲಿ ರಿಯಾಯಿತಿ ನೀಡಲಾಗಿದೆ. ಮ್ಯುಟೇಷನ್ ವಿಲೇವಾರಿಗೆ 30 ದಿನಗಳ ಕಾಲಾವಕಾಶ ನೀಡಲಾಗಿದೆ. ಸ್ವೀಕೃತವಾದ ಅರ್ಜಿಗಳಿಗೆ ತ್ವರಿತ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದ ಎಲ್ಲಾ ನಾಡಕಛೇರಿಗಳಲ್ಲಿ ಪೌತಿ ಖಾತೆ ಮಾಡಿಸಿಕೊಳ್ಳಲು ನಮೂನೆ 1 ರ ಅರ್ಜಿ ಲಭ್ಯವಿರುತ್ತವೆ ಎಂದು ಹೇಳಲಾಗಿದೆ.