ಶಿವಮೊಗ್ಗ: ಕೃಷಿ ಉತ್ಪನ್ನ ಸಾಕಾಣಿಕೆ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಶಿವಮೊಗ್ಗದ ಪ್ರೇರಣಾ ಇಂಜಿನಿಯರಿಂಗ್ ಕಾಲೇಜ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಮಲ್ನಾಡ್ ಸ್ಟಾರ್ಟ್ ಅಪ್ ಶೃಂಗಸಭೆ -2025 ಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ರೈತರ ಬೆಳೆಗೆ ನ್ಯಾಯಯುತ ಬೆಲೆ ದೊರಕಿಸಿಕೊಡುವ ಉದ್ದೇಶದಿಂದ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸುವ ವೆಚ್ಚವನ್ನು ಸರ್ಕಾರದಿಂದಲೇ ಭರಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಸಾಗಾಣಿಕೆ ವೆಚ್ಚ ಭರಿಸಲಾಗದ ಕಾರಣಕ್ಕೆ ಅನೇಕ ರೈತರು ಹೆಚ್ಚಿನ ಬೆಲೆ ಸಿಗುವ ಮಾರುಕಟ್ಟೆಗೆ ಉತ್ಪನ್ನಗಳನ್ನು ತೆಗೆದುಕೊಂಡು ಹೋಗಲು ಸಾಧ್ಯವಾಗದೆ ಸ್ಥಳೀಯವಾಗಿ ಕಡಿಮೆ ಬೆಲೆಗೆ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ. ಇದರಿಂದ ಕೃಷಿ ಉತ್ಪನ್ನಗಳ ಲಾಭದ ಹೆಚ್ಚಿನ ಪಾಲು ಮಧ್ಯವರ್ತಿಗ ಕೈ ಸೇರುತ್ತದೆ. ಇದನ್ನು ತಪ್ಪಿಸಲು ಸಾಗಾಣಿಕೆ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ ಎಂದು ತಿಳಿಸಿದ್ದಾರೆ.
ಕೃಷಿ ಉತ್ಪನ್ನದ ಸಾಗಾಣಿಕೆ ವೆಚ್ಚದ ಶೇಕಡ 50ರಷ್ಟು ವೆಚ್ಚವನ್ನು ಕೇಂದ್ರ ಸರ್ಕಾರ, ಉಳಿದ ಶೇಕಡ 50ರಷ್ಟು ವೆಚ್ಚವನ್ನು ಆಯಾ ರಾಜ್ಯ ಸರ್ಕಾರಗಳು ಭರಿಸಲಿದ್ದು, ರೈತ ಉತ್ಪಾದಕ ಸಂಸ್ಥೆಗಳು ಬೆಳೆಗಳನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋದಲ್ಲಿ ಅದರ ಸಾಗಾಣಿಕೆ ವೆಚ್ಚವನ್ನು ಕೂಡ ಸರ್ಕಾರದಿಂದಲೇ ಭರಿಸುವಂತಹ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದು ಹೇಳಿದ್ದಾರೆ.