
ಮಂಗಳೂರು: ಡೀಮ್ಡ್ ಫಾರೆಸ್ಟ್ ನಿಯಮ ಸರಳಗೊಳಿಸಿ ರಾಜ್ಯದ ರೈತರ ಆತಂಕ ದೂರ ಮಾಡಲು ಸರ್ಕಾರ ಕ್ರಮಕೈಗೊಂಡಿದೆ.
ಮೂಡಬಿದರೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, 6.5 ಲಕ್ಷ ಎಕರೆ ಭೂಮಿಯನ್ನು ಡೀಮ್ಡ್ ಫಾರೆಸ್ಟ್ ನಿಂದ ಹೊರಗಿಡಲು ಸರ್ಕಾರ ತೀರ್ಮಾನ ಕೈಗೊಂಡಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ರೈತರಿಗೆ ಅನೇಕ ವರ್ಷಗಳಿಂದ ಡೀಮ್ಡ್ ಫಾರೆಸ್ಟ್ ನಿಯಮದಿಂದ ಆತಂಕ ಉಂಟಾಗಿತ್ತು. ಇದನ್ನು ಕೈಬಿಡಬೇಕೆಂದು ರೈತರು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದರು. ಇದರ ಅನ್ವಯ 6.5 ಲಕ್ಷ ಎಕರೆ ಭೂಮಿಯನ್ನು ಡೀಮ್ಡ್ ಅರಣ್ಯದಿಂದ ಹೊರಗಿಡಲು ಸುಪ್ರೀಂಕೋರ್ಟ್ಗೆ ಅಫಿಡವಿಟ್ ಸಲ್ಲಿಸಲಾಗಿದೆ. ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗಿದೆ ಎಂದು ಹೇಳಿದ್ದಾರೆ.
ಸೊಪ್ಪಿನಬೆಟ್ಟ, ಕುಮ್ಕಿ, ಕಾನ ಬಾಣೆ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಕ್ರಮಕೈಗೊಂಡಿದೆ. ರೈತರು ಭೂಮಿಯನ್ನು ಸಾಗುವಳಿ ಮಾಡುತ್ತಿದ್ದರೂ ಅವರಿಗೆ ಯಾವುದೇ ದಾಖಲೆ ಇಲ್ಲವಾಗಿದೆ. ಈ ನಿಟ್ಟಿನಲ್ಲಿ ರೈತರು ನೆಮ್ಮದಿಯಿಂದ ಜೀವನ ನಡೆಸಲು ಅಗತ್ಯವಾದ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದ್ದಾರೆ.