ಬೆಂಗಳೂರು: ಅರಣ್ಯ ಭೂಮಿಯಲ್ಲಿ ಕೃಷಿ ಮಾಡುತ್ತಿರುವ ರೈತರಿಗೆ ಸಿಹಿ ಸುದ್ದಿ ಸಿಕ್ಕಿದೆ. ಶೀಘ್ರವೇ 7,000 ರೈತರಿಗೆ ಹಕ್ಕು ಪತ್ರ ನೀಡಲಾಗುವುದು.
13750 ಅರ್ಜಿದಾರರ ಪೈಕಿ 7000 ಜನರಿಗೆ ಹಕ್ಕು ಪತ್ರ ನೀಡಲಿದ್ದು, ಒತ್ತುವರಿಯದ ಎರಡು ಲಕ್ಷ ಎಕರೆ ಅರಣ್ಯ ಭೂಮಿ ತೆರವಿಗೆ ಸೂಚನೆ ನೀಡಲಾಗಿದೆ. ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಕುರಿತು ಮಾಹಿತಿ ನೀಡಿದ್ದಾರೆ.
ಅರಣ್ಯ ಇಲಾಖೆಗೆ ಸೇರಿದ ಭೂಮಿಯಲ್ಲಿ ಅರಣ್ಯ ಸಂರಕ್ಷಣಾ ಕಾಯ್ದೆ 1980ರ ಜಾರಿಗೂ ಮೊದಲು ಕೃಷಿ ಮಾಡುತ್ತಿರುವವರಿಗೆ ಹಕ್ಕು ಪತ್ರ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಜನವರಿಯೊಳಗೆ 7 ಸಾವಿರ ರೈತರಿಗೆ ಹಕ್ಕು ಪತ್ರ ನೀಡಲಾಗುವುದು ಎಂದು ತಿಳಿಸಿದ್ದಾರೆ.
ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಿದ 13,750 ಪ್ರಕರಣಗಳ 31,864 ಎಕರೆ ಭೂಮಿ ಇದೆ. ಇದರಲ್ಲಿ 7 ಸಾವಿರ ಪ್ರಕಾರಗಳಿಗೆ ಹಕ್ಕು ಪತ್ರ ನೀಡಲಾಗುವುದು. ಮೂರು ಎಕರೆಗಿಂತ ಹೆಚ್ಚಿನ ಭೂಮಿ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಸುಮಾರು 2 ಲಕ್ಷ ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದ್ದು, ಇದನ್ನು ವಶಪಡಿಸಿಕೊಳ್ಳಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಎಷ್ಟೇ ಪ್ರಭಾವಿಗಳಿದ್ದರೂ ಮುಲಾಜಿಲ್ಲದೆ ತೆರವುಗೊಳಿಸಲಾಗುವುದು ಎಂದು ಹೇಳಿದ್ದಾರೆ.