ನವದೆಹಲಿ : ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಕಳೆದ ಒಂದೂವರೆ ವರ್ಷಗಳಿಂದ ಹೋರಾಟ ನಡೆಸುತ್ತಿದ್ದರು. ಸದ್ಯ ಕೇಂದ್ರ ಆ ಕಾಯ್ದೆಗಳನ್ನು ಹಿಂಪಡೆಯುವುದರ ಮೂಲಕ ರೈತರ ಹಲವು ಬೇಡಿಕೆಗಳನ್ನೂ ಈಡೇರಿಸುವುದಾಗಿ ಹೇಳಿದೆ. ಹೀಗಾಗಿ ರೈತರು ಪ್ರತಿಭಟನಾ ಸ್ಥಳದಿಂದ ಹೊರಡುತ್ತಿದ್ದಾರೆ.
ರೈತರು ದೆಹಲಿಯ ಸಿಂಘು, ಟಿಕ್ರಿ, ಘಾಜಿಪುರ, ಮತ್ತು ಘಾಜಿಯಾಬಾದ್ ಗಡಿಗಳಲ್ಲಿ ತಾತ್ಕಾಲಿಕ ಟೆಂಟ್ ಗಳನ್ನು ನಿರ್ಮಿಸಿ ಪ್ರತಿಭಟನೆ ಕೈಗೊಂಡಿದ್ದರು. ಬೇಡಿಕೆಗಳು ಈಡೇರಿದ್ದರಿಂದಾಗಿ ಟೆಂಟ್ ಖಾಲಿ ಮಾಡುತ್ತಿದ್ದಾರೆ.
ಪ್ರತಿಭಟನೆಯ ಸ್ಥಳಗಳನ್ನು ರೈತರು ಸ್ವಚ್ಛಗೊಳಿಸುತ್ತಿದ್ದಾರೆ. ಟೆಂಟ್ ಗೆ ಬಳಸಿದ್ದ ಬಿದಿರಿನ ವಸ್ತುಗಳನ್ನು ಕೂಡ ಕಿತ್ತು, ಅಲ್ಲಿನ ಜನರಿಗೆ ನೀಡುತ್ತಿದ್ದಾರೆ. ಇಂದು ಬೆಳಿಗ್ಗೆ 9 ರಿಂದಲೇ ರೈತರು ತಮ್ಮ ತಮ್ಮ ಊರುಗಳಿಗೆ ಹೊರಡುತ್ತಿದ್ದಾರೆ. ಬಸ್, ರೈಲು, ಹಾಗೂ ಟ್ರ್ಯಾಕ್ಟರ್ ಗಳ ಮೂಲಕ ತಮ್ಮ ಊರುಗಳತ್ತ ಹೆಜ್ಜೆ ಹಾಕುತ್ತಿದ್ದಾರೆ.