ಹುಬ್ಬಳ್ಳಿ: ಮಳೆ ಇಲ್ಲದೆ ಬೆಳೆ ಉಳಿಸಿಕೊಳ್ಳುವ ಆತಂಕದಲ್ಲಿದ್ದ ರೈತರಿಗೆ ಸಿಹಿ ಸುದ್ದಿ ಸಿಕ್ಕಿದೆ. ರೈತರಿಗೆ ದಿನಕ್ಕೆ 5 ಗಂಟೆ ಬದಲು 6 ಗಂಟೆ ವಿದ್ಯುತ್ ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ಭತ್ತ ಮತ್ತು ಕಬ್ಬು ಬೆಳೆಗೆ ಹೆಚ್ಚಿನ ವಿದ್ಯುತ್ ಪೂರೈಕೆ ಮಾಡಬೇಕೆಂಬ ಬೇಡಿಕೆ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಿಂದ ವಿದ್ಯುತ್ ಅಭಾವ ತೀವ್ರವಾಗಿದ್ದು, ವಿದ್ಯುತ್ ಕೊರತೆ ಸರಿದೂಗಿಸಲು ಸರ್ಕಾರ ಬೇರೆ ಬೇರೆ ಮೂಲಗಳಿಂದ ವಿದ್ಯುತ್ ಖರೀದಿಸಲು ಮುಂದಾಗಿದೆ.
ಕಬ್ಬು ಮತ್ತು ಭತ್ತ ಬೆಳೆಗಾರರಿಗೆ ದಿನ 6 ಗಂಟೆ ವಿದ್ಯುತ್ ಪೂರೈಸಲು ಹೆಸ್ಕಾಂ ಮುಂದಾಗಿದ್ದು, ಅಕ್ಟೋಬರ್ 25 ರಿಂದ ಹೆಸ್ಕಾಂ ವ್ಯಾಪ್ತಿಯ ಧಾರವಾಡ, ಬೆಳಗಾವಿ, ವಿಜಯಪುರ, ಗದಗ, ಹಾವೇರಿ, ಬಾಗಲಕೋಟೆ, ಉತ್ತರ ಕನ್ನಡ ಜಿಲ್ಲೆಯ ಬೆಳೆಗಾರರಿಗೆ 6 ಗಂಟೆ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ಹೇಳಲಾಗಿದೆ.
ಇತ್ತೀಚಿಗಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂಧನ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಕೃಷಿಗೆ ಸಮರ್ಪಕ ವಿದ್ಯುತ್ ಪೂರೈಕೆಗೆ ಸೂಚನೆ ನೀಡಿದ್ದರು.