ಬೆಂಗಳೂರು: ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿಯಿಂದಾಗಿ ಜಾನುವಾರುಗಳಿಗೆ ಮೇವು, ನೀರಿನ ಸಮಸ್ಯೆ ಎದುರಾಗಿದೆ. ಮೊದಲೇ ಸಂಕಷ್ಟದಲ್ಲಿರುವ ರೈತರಿಗೆ ಹಾಲು ಪ್ರೋತ್ಸಾಹಧನ ಕಳೆದ ಐದು ತಿಂಗಳಿನಿಂದ ಬಿಡುಗಡೆಯಾಗಿಲ್ಲ. ಇದರಿಂದಾಗಿ ಹೈನುಗಾರಿಕೆ ನಂಬಿಕೊಂಡ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ರಾಜ್ಯ ಸರ್ಕಾರ ಹೈನುಗಾರಿಕೆಗೆ ಉತ್ತೇಜನ ನೀಡಲು ಹಾಲಿನ ಉತ್ಪಾದನೆ ಹೆಚ್ಚಳಕ್ಕಾಗಿ ಲೀಟರ್ ಗೆ 5 ರೂಪಾಯಿ ಪ್ರೋತ್ಸಾಹ ಧನವನ್ನು ಹಾಲು ಉತ್ಪಾದಕರಿಗೆ ನೀಡುತ್ತಿದೆ. ಎರಡು ಮೂರು ತಿಂಗಳಿಗೊಮ್ಮೆ ಒಟ್ಟಿಗೆ ಹಣ ನೀಡಲಾಗುತ್ತಿತ್ತು. ಈಗ ಐದು ತಿಂಗಳಿನಿಂದ ಪ್ರೋತ್ಸಾಹ ಧನ ಬಾಕಿ ಉಳಿಸಿಕೊಂಡಿದೆ. ಐದು ತಿಂಗಳಲ್ಲಿ ಸುಮಾರು 652 ಕೋಟಿ ಬಾಕಿ ಉಳಿದಿದ್ದು, ಪ್ರೋತ್ಸಾಹ ಧನಕ್ಕಾಗಿ ಹಾಲು ಉತ್ಪಾದಕರು ಕಾಯುವಂತಾಗಿದೆ.
2023ರ ಜುಲೈನಿಂದ ಸೆಪ್ಟಂಬರ್ ವರೆಗಿನ ಪ್ರೋತ್ಸಾಹ ಧನ ಬಾಕಿಯನ್ನು ಲೋಕಸಭೆ ಚುನಾವಣೆ ಘೋಷಣೆ ಮೊದಲು ಬಿಡುಗಡೆ ಮಾಡಲಾಗಿತ್ತು. 2023ರ ಅಕ್ಟೋಬರ್ ನಿಂದ ಫೆಬ್ರವರಿವರೆಗಿನ ಪ್ರೋತ್ಸಾಹ ಧನ ಬಾಕಿ ಉಳಿದಿದೆ. ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸದ್ಯಕ್ಕೆ ಬಾಕಿ ಹಣ ಬಿಡುಗಡೆ ಮಾಡುವ ಸಾಧ್ಯತೆ ಇಲ್ಲ. ಜೂನ್ ಎರಡನೇ ವಾರದವರೆಗೂ ಕಾಯುವ ಅನಿವಾರ್ಯತೆ ಎದುರಾಗಿದೆ.