ಬೆಂಗಳೂರು: ರೈತರ ಖಾತೆಗೆ ಜಮಾ ಆದ ಬರ ಪರಿಹಾರದ ಮೊತ್ತವನ್ನು ಬ್ಯಾಂಕುಗಳು ಸಾಲದ ಖಾತೆಗೆ ಜಮಾ ಮಾಡಿಕೊಳ್ಳುತ್ತಿವೆ. ಇದರಿಂದಾಗಿ ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ಕೇಂದ್ರ ಸರ್ಕಾರ ಬರದಿಂದ ಸಂಕಷ್ಟದಲ್ಲಿರುವ ರೈತರಿಗಾಗಿ ಪರಿಹಾರ ಬಿಡುಗಡೆ ಮಾಡಿದೆ. ಪ್ರತಿ ಹೆಕ್ಟೇರ್ ಮಳೆಯಾಶ್ರಿತ ಒಣ ಬೇಸಾಯಕ್ಕೆ 8,500 ರೂ., ನೀರಾವರಿಗೆ 17,000 ರೂ., ಬಹುವಾರ್ಷಿಕ/ ತೋಟಗಾರಿಕೆ ಬೆಳೆಗೆ 22,500 ರೂ.ವರೆಗೆ ಪರಿಹಾರವನ್ನು ಸರ್ಕಾರ ನಿಗದಿಪಡಿಸಿದೆ.
ರಾಜ್ಯ ಸರ್ಕಾರ ರೈತರ ಖಾತೆಗಳಿಗೆ ಬರ ಪರಿಹಾರ ಮೊತ್ತ ಜಮಾ ಆಗುವಂತೆ ಮಾಡಿದೆ. ಆದರೆ, ಈ ಪರಿಹಾರದ ಹಣವನ್ನು ಬ್ಯಾಂಕುಗಳಲ್ಲಿ ರೈತರ ಉಳಿತಾಯ ಖಾತೆಗೆ ಜಮಾ ಮಾಡದೆ ಸಾಲದ ಖಾತೆಗಳಿಗೆ ಜಮಾ ಮಾಡಿಕೊಳ್ಳುತ್ತಿದೆ. ಯಾದಗಿರಿ ಜಿಲ್ಲೆಯ ಹುಣಸಗಿಯ ಪ್ರಗತಿ ಕೃಷ್ಣ ಬ್ಯಾಂಕಿನಲ್ಲಿ ಈ ರೀತಿ ಅನೇಕ ರೈತರ ಖಾತೆಗೆ ಬಂದ ಬರ ಪರಿಹಾರದ ಮೊತ್ತವನ್ನು ಸಾಲದ ಖಾತೆಗೆ ಜಮಾ ಮಾಡಲಾಗಿದ್ದು, ರೈತರು ಪ್ರತಿಭಟನೆ ನಡೆಸಿದ್ದಾರೆ.
ಕುಂದಗೋಳ ತಾಲೂಕಿನಲ್ಲೂ ಇದೇ ರೀತಿ ಆಗಿದೆ. ಅನೇಕ ರೈತರಿಗೆ ಸರ್ಕಾರ ನೀಡಿದ ಬರ ಪರಿಹಾರದ ಮೊತ್ತವನ್ನು ಕೆಲವು ಬ್ಯಾಂಕುಗಳು ಬೆಳೆ ಸಾಲಕ್ಕೆ ಹೊಂದಿಸಿಕೊಳ್ಳುತ್ತಿದ್ದಾರೆ. ಇದರಿಂದ ಸಂಕಷ್ಟದಲ್ಲಿರುವ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಕಷ್ಟದಲ್ಲಿರುವ ರೈತರಿಗೆ ಬರ ಪರಿಹಾರ ಮೊತ್ತ ಸಿಗದಂತಾಗಿದೆ. ಸರ್ಕಾರ ಕ್ರಮ ಕೈಗೊಂಡು ಬೆಳೆ ಪರಿಹಾರ ಮೊತ್ತ ದೊರಕಿಸಿಕೊಡಬೇಕೆಂದು ರೈತರು ಒತ್ತಾಯಿಸಿದ್ದಾರೆ.