ನವದೆಹಲಿ: ರೈತರ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡಲು ನಿರ್ಧರಿಸಿದ್ದು, ಸಂಸತ್ ಚಳಿಗಾಲದ ಅಧಿವೇಶನದ ಮೊದಲ ದಿನವಾದ ನಾಳೆ ಮಸೂದೆ ಮಂಡಿಸಲು ತಿರ್ಮಾನಿಸಿದೆ. ನಾಳೆ ಲೋಕಸಭೆಯಲ್ಲಿ ಈ ಕುರಿತಾದ ವಿಧೇಯಕ ಮಂಡನೆಯಾಗಲಿದೆ.
ಇನ್ನು ರೈತರಿಂದ ಸೋಮವಾರ ಸಂಸತ್ ಭವನದವರೆಗೆ ನಡೆಸಲು ಉದ್ದೇಶಿಸಿದ್ದ ಟ್ರ್ಯಾಕ್ಟರ್ ಪರೇಡ್ ಕೈಬಿಡಲಾಗಿದೆ. ಈ ಬೆಳವಣಿಗೆಗಳ ಬೆನ್ನಲ್ಲೇ ರೈತರ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಹೊಸ ಸಮಿತಿಯನ್ನು ರಚಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.
ಬಹುಬೆಳೆ ಪದ್ಧತಿಗೆ ಉತ್ತೇಜನ ನೀಡುವುದು, ಶೂನ್ಯ ಬಂಡವಾಳ ಕೃಷಿಗೆ ಪ್ರೋತ್ಸಾಹ ನೀಡುವುದು, ಕನಿಷ್ಠ ಬೆಂಬಲ ಬೆಲೆಯಲ್ಲಿ ಪಾರದರ್ಶಕತೆ ಮೊದಲಾದ ರೈತರ ಬೇಡಿಕೆಗಳ ಕುರಿತು ಕೇಂದ್ರ ಸರ್ಕಾರ ಸಮಿತಿಯನ್ನು ರಚಿಸಲು ಮುಂದಾಗಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ತಿಳಿಸಿದ್ದಾರೆ.