ನವದೆಹಲಿ: ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ನಿರಂತರ ಹೋರಾಟ ಕೈಗೊಂಡಿದ್ದ ರೈತರು ಇಂದು ರಾಷ್ಟ್ರರಾಜಧಾನಿ ದೆಹಲಿ ಗಡಿಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ದೆಹಲಿಯ ಗಡಿಭಾಗದ ಪ್ರದೇಶಗಳಾದ ಸಿಂಘು, ಟೆಕ್ರಿ, ಗಾಜಿಪುರ ಪ್ರದೇಶಗಳಲ್ಲಿ ಬೆಳಗ್ಗೆ 11 ಗಂಟೆಯಿಂದ ಟ್ರ್ಯಾಕ್ಟರ್ ರ್ಯಾಲಿ ಶುರುವಾಗಲಿದೆ. ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರರಾಜಧಾನಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಗಣರಾಜ್ಯೋತ್ಸವ ಸಮಾರಂಭ ಮುಗಿಯುತ್ತಿದ್ದಂತೆ ರೈತರ ಪರೇಡ್ ಶುರುವಾಗಲಿದೆ. ಅಪಾರ ಸಂಖ್ಯೆಯ ರೈತರು ಬೃಹತ್ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ. ದೆಹಲಿ ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು ಭಾರೀ ಭದ್ರತೆ ನಿಯೋಜಿಸಲಾಗಿದೆ. ಟ್ರ್ಯಾಕ್ಟರ್ ಇಂಜಿನ್ ಗಳೊಂದಿಗೆ ಮಾತ್ರ ಪ್ರತಿಭಟನೆಗೆ ಅವಕಾಶ ನೀಡಲಾಗಿದೆ. ಟ್ರಾಲಿ ತರಲು ಅವಕಾಶ ನೀಡಿಲ್ಲ. ಬೇರೆ ವಾಹನಗಳಲ್ಲಿ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಒಂದು ಟ್ರ್ಯಾಕ್ಟರ್ ನಲ್ಲಿ ಗರಿಷ್ಠ 5 ಜನರಿಗೆ ಅವಕಾಶ ನೀಡಲಾಗಿದೆ. ಟ್ರ್ಯಾಕ್ಟರ್ ಗಳಲ್ಲಿ ರಾಜಕೀಯ ಪಕ್ಷದ ಧ್ವಜ ಬಳಸುವಂತಿಲ್ಲ. ಶಸ್ತ್ರಾಸ್ತ್ರ ತರುವಂತಿಲ್ಲ. ರಾಷ್ಟ್ರಧ್ವಜ, ರೈತ ಸಂಘಟನೆಗಳ ಧ್ವಜ ಮಾತ್ರ ಬಳಕೆ ಮಾಡಬಹುದಾಗಿದೆ.
ಸಿಂಘು, ಟೆಕ್ರಿ ಗಡಿಯಲ್ಲಿ ಬ್ಯಾರಿಕೇಡ್ ಗಳನ್ನು ಮುರಿದು ರೈತರು ದೆಹಲಿ ಪ್ರವೇಶಿಸಿದ್ದಾರೆ. ಒಳನುಗ್ಗಿದ ರೈತರನ್ನು ತಡೆಯಲು ಪೊಲೀಸರು ಹರಸಾಹಸ ನಡೆಸಿದ್ದಾರೆ.