ಕಲಬುರಗಿ: 2024- 25 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಭಾರಿ ಮಳೆಯಿಂದಾಗಿ ಬೆಳೆ ಹಾನಿಗೊಳಗಾದ ರೈತರಿಗೆ ಪರಿಹಾರದ ಮೊತ್ತ ಮಂಜೂರಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ಮಳೆಯಿಂದ ಹಾನಿಗೊಳಗಾದ ಕೃಷಿ ಹಾಗೂ ತೋಟಗಾರಿಕೆ ಬೆಳೆ ಹಾನಿಯ ಮೊದಲ ಕಂತಿನ ಪರಿಹಾರವಾಗಿ 13.2 ಕೋಟಿ ರೂ. ಇನ್ಪುಟ್ ಸಬ್ಸಿಡಿ ಮಂಜೂರಾಗಿದೆ.
ಹಾನಿಯಾದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ವಿವರಗಳನ್ನು ಗ್ರಾಮ ಆಡಳಿತ ಅಧಿಕಾರಿಗಳು ತಂತ್ರಾಂಶದಲ್ಲಿ ನಮೂದಿಸಿ ಅನುಮೋದಿಸಿದ್ದಾರೆ. ಮೊದಲ ಹಂತದಲ್ಲಿ ಒಟ್ಟು 33,718 ರೈತರಿಗೆ 13.2 ಕೋಟಿ ರೂ.ಗಳನ್ನು ಎನ್.ಡಿ.ಆರ್.ಎಫ್., ಎಸ್.ಡಿ.ಆರ್.ಎಫ್. ಮಾರ್ಗಸೂಚಿ ಅನ್ವಯ ಹಣ ಮಂಜೂರಾತಿ ನೀಡಲಾಗಿದೆ. ನೇರವಾಗಿ ಆಧಾರ್ ಸಂಖ್ಯೆ ಜೋಡಣೆಯಾಗಿರುವ ರೈತರ ಬ್ಯಾಂಕ್ ಖಾತೆಗಳಿಗೆ ಪರಿಹಾರದ ಮೊತ್ತ ಜಮಾ ಮಾಡಲು ಅನುಮೋದನೆ ನೀಡಲಾಗಿದೆ.
ಇನ್ನು ಮೂರ್ನಾಲ್ಕು ದಿನಗಳೊಳಗೆ ಇನ್ಪುಟ್ ಸಬ್ಸಿಡಿ ರೈತರ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.