ಬೆಂಗಳೂರು: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ ವಾರ್ಷಿಕ 6,000 ನೀಡಲಾಗುತ್ತದೆ. ರಾಜ್ಯದಲ್ಲಿ ಈ ರೈತರಿಗೆ ರಾಜ್ಯ ಸರ್ಕಾರ ಕೃಷಿ ಸಮ್ಮಾನ್ ಯೋಜನೆ ಅಡಿ ವಾರ್ಷಿಕ ತಲಾ 4 ಸಾವಿರ ರೂಪಾಯಿ ನೆರವು ನೀಡುತ್ತಿದೆ.
ಕಾಂಗ್ರೆಸ್ ಸರ್ಕಾರ 4 ಸಾವಿರ ರೂಪಾಯಿ ನೀಡುವ ಯೋಜನೆ ಸ್ಥಗಿತಗೊಳಿಸುವ ಸಾಧ್ಯತೆ ಇದೆ ಎಂಬ ಚರ್ಚೆಗಳು ನಡೆದಿವೆ. ವಿಧಾನಸಭೆ ಅಧಿವೇಶನದಲ್ಲಿ ಬಿಜೆಪಿ ಶಾಸಕ ಸುನಿಲ್ ಕುಮಾರ್ ಈ ಕುರಿತು ಪ್ರಶ್ನಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟ ಉತ್ತರ ನೀಡಿಲ್ಲ.
ಬಿಜೆಪಿ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಕೃಷಿಭಾಗ್ಯ ಯೋಜನೆ ನಿಲ್ಲಿಸಿದ್ದರು. ನಾವು ಅದನ್ನು ಮತ್ತೆ ಜಾರಿಗೊಳಿಸಿದ್ದೇವೆ ಎಂದು ಸಿಎಂ ಹೇಳಿದ್ದಾರೆ. ಕೃಷಿ ಭಾಗ್ಯ ಯೋಜನೆ ಬೇಕೋ ಬೇಡವೋ ಹೇಳಿ? ರಾಜ್ಯದ 87 ಲಕ್ಷ ರೈತರಲ್ಲಿ 51 ಲಕ್ಷ ರೈತರಿಗೆ ಮಾತ್ರ ಕೃಷಿ ಸಮ್ಮಾನ್ ಯೋಜನೆ ಕೊಟ್ಟಿದ್ದೀರಿ. ಎಲ್ಲರಿಗೂ ನೀಡಿಲ್ಲ. ಹಾಗಾಗಿ ನಾವು ಬೇರೆ ಕಾರ್ಯಕ್ರಮ ಮಾಡಿದ್ದೇವೆ ಎಂದು ಸಿಎಂ ತಿಳಿಸಿದ್ದಾರೆ.
ರಾಜ್ಯದ ರೈತರಿಗೆ ರಾಜ್ಯ ಸರ್ಕಾರದ ಕೃಷಿ ಸಮ್ಮಾನ್ ಯೋಜನೆ ಅಡಿ ವಾರ್ಷಿಕ 4000 ರೂ. ಹಾಗೂ ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆಯ 6,000 ರೂ. ಸೇರಿ ವಾರ್ಷಿಕ 10,000 ರೂ. ಸಿಗುತ್ತಿತ್ತು. ಕೃಷಿ ಸಮ್ಮಾನ್ ಯೋಜನೆ ಸ್ಥಗಿತವಾದಲ್ಲಿ 4000 ರೂ. ಕಡಿತವಾಗಲಿದೆ ಎಂದು ಹೇಳಲಾಗಿದೆ.