ಬೆಂಗಳೂರು: ರಾಜ್ಯ ಸರ್ಕಾರ ರೈತರ ಮಕ್ಕಳಿಗೆ ಶಿಕ್ಷಣಕ್ಕೆ ಅನುಕೂಲವಾಗುವಂತೆ ಮುಖ್ಯಮಂತ್ರಿ ರೈತರ ವಿದ್ಯಾನಿಧಿ ವಿದ್ಯಾರ್ಥಿವೇತನ ಯೋಜನೆ ಜಾರಿಗೊಳಿಸಿದೆ.
ಆದರೆ, ಇದಕ್ಕಾಗಿ ಪಹಣಿ ಕಡ್ಡಾಯಗೊಳಿಸಿರುವ ಕಾರಣ ಅನೇಕ ಅರ್ಹ ಫಲಾನುಭವಿಗಳಿಗೆ ಯೋಜನೆಯ ಪ್ರಯೋಜನ ಸಿಗದಂತಾಗಿದೆ. ತಂದೆ, ತಾಯಿಯ ಹೆಸರಲ್ಲಿ ಪಹಣಿ ಇರಬೇಕು ಎಂಬ ನಿಯಮವೇ ಅನೇಕ ಮಕ್ಕಳಿಗೆ ಸೌಲಭ್ಯ ಪಡೆಯಲು ಅಡ್ಡಿಯಾಗಿದೆ. ಈ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಜಾರಿಗೊಳಿಸಿದ ಮಹತ್ವಾಕಾಂಕ್ಷಿ ಯೋಜನೆಯ ಪ್ರಯೋಜನ ಅನೇಕ ರೈತರ ಮಕ್ಕಳಿಗೆ ಸಿಗುತ್ತಿಲ್ಲವೆಂದು ಹೇಳಲಾಗಿದೆ.
ಮುಖ್ಯಮಂತ್ರಿ ರೈತ ವಿದ್ಯಾನಿಧಿ ವಿದ್ಯಾರ್ಥಿವೇತನಕ್ಕೆ ಪಹಣಿ ಕಡ್ಡಾಯಗೊಳಿಸಲಾಗಿದೆ. ರೈತರ ಗುರುತಿನ ಚೀಟಿ ನೋಂದಣಿ ಮಾಡಬೇಕಿದ್ದು, ಈ ಸಂಖ್ಯೆ ಇದ್ದರೆ ಮಾತ್ರ ವ್ಯಕ್ತಿಯನ್ನು ರೈತನೆಂದು ಪರಿಗಣಿಸಲಾಗುತ್ತದೆ. ಆದರೆ, ಬಹುತೇಕ ವಿಭಕ್ತ ಕುಟುಂಬಗಳ ಜಮೀನು ಹಿರಿಯರ ಹೆಸರಿನಲ್ಲಿ ಇದ್ದು, ಮಕ್ಕಳ ತಂದೆ, ತಾಯಿ ಹೆಸರಿಗೆ ವರ್ಗಾವಣೆಯಾಗಿಲ್ಲ. ಇದರಿಂದ ರೈತರ ಮಕ್ಕಳು ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.
ಇನ್ನು ಕೆಲವು ಶ್ರೀಮಂತರು ಕೃಷಿ ಜಮೀನುಗಳನ್ನು ಖರೀದಿಸಿದ್ದು, ಇದೇ ಪಹಣಿ ರೈತರ ಗುರುತಿನ ಚೀಟಿ ಸಂಖ್ಯೆ ನೀಡಿ ತಮ್ಮ ಮಕ್ಕಳಿಗೆ ರೈತರ ವಿದ್ಯಾನಿಧಿ ಸೌಲಭ್ಯ ಪಡೆದುಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.