ಬೆಂಗಳೂರು: ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯಡಿ ಅರ್ಹ ರೈತ ಮಕ್ಕಳಿಗೆ ಶಿಷ್ಯವೇತನ ನೀಡಲು ನೋಂದಣಿ ಆರಂಭಿಸಲು ಸರ್ಕಾರ ಸೂಚನೆ ನೀಡಿದೆ.
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಈ ಯೋಜನೆ ಘೋಷಣೆ ಮಾಡಿದ್ದರು. ರೈತರ ಮಕ್ಕಳಿಗೆ ಹೆಚ್ಚಿನ ಹಾಗೂ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶಿಷ್ಯವೇತನ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿದ್ದು, ಈ ಹೊಸ ಶಿಷ್ಯವೇತನ ಯೋಜನೆಯಡಿ ಅರ್ಹ ರೈತ ಮಕ್ಕಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
2021 -22 ನೇ ಶೈಕ್ಷಣಿಕ ಸಾಲಿನಲ್ಲಿ ಪಿ.ಯು.ಸಿ., ಐ.ಟಿ.ಐ., ಡಿಪ್ಲೋಮಾ ಕೋರ್ಸ್ ನ ವಿದ್ಯಾರ್ಥಿಗಳಿಗೆ 2500 ರೂ. ಹಾಗೂ ವಿದ್ಯಾರ್ಥಿನಿಯರಿಗೆ /ತೃತೀಯ ಲಿಂಗಿಗಳಿಗೆ 3000 ರೂ., ನೀಡಲಾಗುವುದು.
ಬಿ.ಎ., ಬಿ.ಎಸ್.ಸಿ., ಬಿ.ಕಾಂ. ಮೊದಲಾದ ಪದವಿ ವಿದ್ಯಾರ್ಥಿಗಳಿಗೆ 5000 ರೂ. ಹಾಗೂ ವಿದ್ಯಾರ್ಥಿನಿಯರಿಗೆ / ತೃತೀಯ ಲಿಂಗಿಗಳಿಗೆ 5500 ರೂ. ಶಿಷ್ಯವೇತನ ನೀಡಲಾಗುತ್ತದೆ.
ಎಲ್.ಎಲ್.ಬಿ., ಪ್ಯಾರಾ ಮೆಡಿಕಲ್, ಬಿ. ಫಾರ್ಮಾ ಹಾಗೂ ನರ್ಸಿಂಗ್ ಇತ್ಯಾದಿ ವೃತ್ತಿಪರ ಕೋರ್ಸ್ಗಳ ವಿದ್ಯಾರ್ಥಿಗಳಿಗೆ 7500 ರೂ. ಹಾಗೂ ವಿದ್ಯಾರ್ಥಿನಿಯರಿಗೆ, ತೃತೀಯ ಲಿಂಗಿಗಳಿಗೆ 8000 ರೂ. ನೀಡಲಾಗುವುದು.
ಎಂ.ಬಿ.ಬಿ.ಎಸ್., ಬಿ.ಇ., ಬಿ.ಟೆಕ್ ಮತ್ತು ಎಲ್ಲಾ ಸ್ನಾತಕೋತ್ತರ ಕೋರ್ಸ್ಗಳ ವಿದ್ಯಾರ್ಥಿಗಳಿಗೆ 10,000 ರೂ. ಹಾಗೂ ವಿದ್ಯಾರ್ಥಿನಿಯರು, ತೃತೀಯ ಲಿಂಗಿಗಳಿಗೆ 11,000 ರೂ. ಶಿಷ್ಯವೇತನ ನೀಡಲಾಗುತ್ತದೆ.
ರಾಜ್ಯ ಕೃಷಿ ಇಲಾಖೆಯಿಂದ ರೈತ ಮಕ್ಕಳ ಹೆಚ್ಚಿನ ಮತ್ತು ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು ಈ ಹೊಸ ಶಿಷ್ಯವೇತನ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಎಸ್.ಎಸ್.ಎಲ್.ಸಿ. ಅಥವಾ 10ನೇ ತರಗತಿಯನ್ನು ಪೂರ್ಣಗೊಳಿಸಿದ ನಂತರ ರಾಜ್ಯದ ಯಾವುದೇ ಭಾಗದಲ್ಲಿರುವ, ಅಧಿಕೃತವಾಗಿ ನೋಂದಣಿಯಾಗಿರುವ ಶಿಕ್ಷಣ ಸಂಸ್ಥೆಗಳು ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್ಗಳವರೆಗೆ ಪ್ರವೇಶ ಪಡೆದಿರುವ ಕರ್ನಾಟಕ ರಾಜ್ಯದ ರೈತರ ಅರ್ಹ ಮಕ್ಕಳ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ (ಡಿಬಿಟಿ) ಪದ್ದತಿಯ ಮೂಲಕ 2021-22ನೇ ಸಾಲಿನಿಂದ ಜಾರಿಗೆ ಬರುವಂತೆ ಈ ಕೆಳಕಂಡಂತೆ ವಾರ್ಷಿಕ ಶಿಷ್ಯವೇತನ ರೂಪದಲ್ಲಿ ಒದಗಿಸಲಾಗುತ್ತದೆ.
ಅರ್ಹ ರೈತ ಮಕ್ಕಳು https://ssp.postmatric.karnataka.gov.in/2122_ca/ ಲಿಂಕ್ ಉಪಯೋಗಿಸಿ ಶಿಷ್ಯವೇತನಕ್ಕಾಗಿ ಖಾತೆಯನ್ನು ಸೃಜಿಸಬಹುದಾಗಿದೆ. ರೈತರ ಮಕ್ಕಳ ತಂದೆ-ತಾಯಿ ಇಬ್ಬರೂ ಕೃಷಿ ಜಮೀನಿನ ಒಡೆಯರಾಗಿದ್ದರೆ, ಈ ಯೋಜನೆಯಲ್ಲಿ ಒಂದು ಶಿಷ್ಯ ವೇತನಕ್ಕೆ ಮಾತ್ರ ವಿದ್ಯಾರ್ಥಿಗಳು ಅರ್ಹರಾಗಿರುತ್ತಾರೆ. ಈ ಶಿಷ್ಯವೇತನವನ್ನು ಯಾವುದಾದರೂ ಒಂದು ವಿಧದ ಕೋರ್ಸ್ಗೆ ನೀಡಲಾಗುತ್ತದೆ.
ಈ ಶಿಷ್ಯವೇತನವನ್ನು ಕರ್ನಾಟಕ ರಾಜ್ಯದ ಎಲ್ಲಾ ವರ್ಗದ ರೈತರ ಮಕ್ಕಳು ರಾಜ್ಯದ ಇತರೆ ಯಾವುದೇ (ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಓಬಿಸಿ, ಮೈನಾರಿಟಿ) ಶಿಷ್ಯವೇತನವನ್ನು ಪಡೆಯಲು ಆಗದಿದ್ದಲ್ಲಿ ರೈತರ ಮಕ್ಕಳ ಶಿಷ್ಯವೇತನಕ್ಕೆ http://ssp.postmatric.karnataka.gov.in ಮುಖಾಂತರ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ವಿದ್ಯಾರ್ಥಿಗಳು ತಮ್ಮ ಬ್ಯಾಂಕ್ ಖಾತೆಗಳಿಗೆ ಕಡ್ಡಾಯವಾಗಿ ಆಧಾರ್ ಜೋಡಣೆ ಮಾಡಿಸಬೇಕಿದೆ ಎನ್ನಲಾಗಿದೆ.