ಕಲಬುರಗಿ: ಪ್ರಸಕ್ತ 2021-22ನೇ ಸಾಲಿನ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯಡಿ ಅರ್ಹ ರೈತ ಮಕ್ಕಳಿಗೆ ಹೆಚ್ಚಿನ ಹಾಗೂ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶಿಷ್ಯವೇತನ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಹೊಸ ಶಿಷ್ಯವೇತನ ಯೋಜನೆಯಡಿ ಅರ್ಹ ರೈತ ಮಕ್ಕಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ರಾಜ್ಯ ಕೃಷಿ ಇಲಾಖೆಯಿಂದ ರೈತ ಮಕ್ಕಳ ಹೆಚ್ಚಿನ ಮತ್ತು ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು ಈ ಹೊಸ ಶಿಷ್ಯವೇತನ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಎಸ್.ಎಸ್.ಎಲ್.ಸಿ. ಅಥವಾ 10ನೇ ತರಗತಿಯನ್ನು ಪೂರ್ಣಗೊಳಿಸಿದ ನಂತರ ರಾಜ್ಯದ ಯಾವುದೇ ಭಾಗದಲ್ಲಿರುವ, ಅಧಿಕೃತವಾಗಿ ನೋಂದಣಿಯಾಗಿರುವ ಶಿಕ್ಷಣ ಸಂಸ್ಥೆಗಳು ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್ಗಳವರೆಗೆ ಪ್ರವೇಶ ಪಡೆದಿರುವ ಕರ್ನಾಟಕ ರಾಜ್ಯದ ರೈತರ ಅರ್ಹ ಮಕ್ಕಳ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ (ಡಿಬಿಟಿ) ಪದ್ದತಿಯ ಮೂಲಕ 2021-22ನೇ ಸಾಲಿನಿಂದ ಜಾರಿಗೆ ಬರುವಂತೆ ಈ ಕೆಳಕಂಡಂತೆ ವಾರ್ಷಿಕ ಶಿಷ್ಯವೇತನ ರೂಪದಲ್ಲಿ ಒದಗಿಸಲಾಗುತ್ತದೆ.
ಪದವಿಯ ಮುಂಚೆ ಪಿ.ಯು.ಸಿ., ಐ.ಟಿ.ಐ., ಡಿಪ್ಲೋಮಾ ಕೋರ್ಸಿನ ಬಾಲಕರಿಗೆ 2500 ರೂ. ಹಾಗೂ ಬಾಲಕಿಯರಿಗೆ/ಅನ್ಯ ಲಿಂಗದವರಿಗೆ 3000 ರೂ., ಎಲ್ಲಾ ಬಿ.ಎ., ಬಿ.ಎಸ್.ಸಿ., ಬಿ.ಕಾಂ. ಇತ್ಯಾದಿ; ಎಂ.ಬಿ.ಬಿ.ಎಸ್/ಬಿ.ಇ/ಬಿ.ಟೆಕ್ ಮತ್ತು ವೃತ್ತಿಪರ ಕೋರ್ಸ್ಗಳನ್ನು ಹೊರತುಪಡಿಸಿ ಬಾಲಕರಿಗೆ 5000 ರೂ. ಹಾಗೂ ಬಾಲಕಿಯರಿಗೆ/ ಅನ್ಯ ಲಿಂಗದವರಿಗೆ 5500 ರೂ.ಗಳ ಶಿಷ್ಯವೇತನ ನೀಡಲಾಗುತ್ತದೆ. ಎಲ್.ಎಲ್.ಬಿ., ಪ್ಯಾರಾ ಮೆಡಿಕಲ್, ಬಿ. ಫಾರ್ಮ ಹಾಗೂ ನರ್ಸಿಂಗ್ ಇತ್ಯಾದಿ ವೃತ್ತಿಪರ ಕೋರ್ಸ್ಗಳ ಬಾಲಕರಿಗೆ 7500 ರೂ. ಹಾಗೂ ಬಾಲಕಿಯರಿಗೆ, ಅನ್ಯ ಲಿಂಗದವರಿಗೆ 8000 ರೂ., ಎಂ.ಬಿ.ಬಿ.ಎಸ್., ಬಿ.ಇ., ಬಿ.ಟೆಕ್ ಮತ್ತು ಎಲ್ಲಾ ಸ್ನಾತಕೋತ್ತರ ಕೋರ್ಸ್ಗಳ ಬಾಲಕರಿಗೆ 10,000 ರೂ. ಹಾಗೂ ಬಾಲಕಿಯರಿಗೆ/ ಅನ್ಯ ಲಿಂಗದವರಿಗೆ 11,000 ರೂ. ಗಳ ಶಿಷ್ಯವೇತನ ನೀಡಲಾಗುತ್ತದೆ.
ಅರ್ಹ ರೈತ ಮಕ್ಕಳು https://ssp.postmatric.karnataka.gov.in/2122_ca/ ಲಿಂಕ್ ಉಪಯೋಗಿಸಿ ಶಿಷ್ಯವೇತನಕ್ಕಾಗಿ ಖಾತೆಯನ್ನು ಸೃಜಿಸಬಹುದಾಗಿದೆ. ರೈತರ ಮಕ್ಕಳ ತಂದೆ-ತಾಯಿ ಇಬ್ಬರೂ ಕೃಷಿ ಜಮೀನಿನ ಒಡೆಯರಾಗಿದ್ದರೆ, ಈ ಯೋಜನೆಯಲ್ಲಿ ಒಂದು ಶಿಷ್ಯ ವೇತನಕ್ಕೆ ಮಾತ್ರ ವಿದ್ಯಾರ್ಥಿಗಳು ಅರ್ಹರಾಗಿರುತ್ತಾರೆ. ಈ ಶಿಷ್ಯವೇತನವನ್ನು ಯಾವುದಾದರೂ ಒಂದು ವಿಧದ ಕೋರ್ಸ್ಗೆ ನೀಡಲಾಗುತ್ತದೆ.
ಈ ಶಿಷ್ಯವೇತನವನ್ನು ಕರ್ನಾಟಕ ರಾಜ್ಯದ ಎಲ್ಲಾ ವರ್ಗದ ರೈತರ ಮಕ್ಕಳು ರಾಜ್ಯದ ಇತರೆ ಯಾವುದೇ (ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಓಬಿಸಿ, ಮೈನಾರಿಟಿ) ಶಿಷ್ಯವೇತನವನ್ನು ಪಡೆಯಲು ಆಗದಿದ್ದಲ್ಲಿ ರೈತರ ಮಕ್ಕಳ ಶಿಷ್ಯವೇತನಕ್ಕೆ http://ssp.postmatric.karnataka.gov.in ಮುಖಾಂತರ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಇದಲ್ಲದೆ, ವಿದ್ಯಾರ್ಥಿಗಳು ತಮ್ಮ ಬ್ಯಾಂಕ್ ಖಾತೆಗಳಿಗೆ ಕಡ್ಡಾಯವಾಗಿ ಆಧಾರ್ ಜೋಡಣೆ ಮಾಡಿಸುವುದರೊಂದಿಗೆ ಎನ್ಪಿಸಿಐ ಲಿಂಕ್ ಕೂಡ ಮಾಡಿಸುವುದು ಕಡ್ಡಾಯವಾಗಿದೆ ಎಂದು ಕಲಬುರಗಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.