ಬೆಂಗಳೂರು: ಮೂರ್ನಾಲ್ಕು ವರ್ಷಗಳಿಂದ ಉತ್ತಮ ದರ ಸಿಗದೇ ಚಾಮರಾಜನಗರ, ಕಲಬುರಗಿ, ಬಾಗಲಕೋಟೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಅರಿಶಿನ ಬೆಳೆದಿದ್ದ ರೈತರು ಕಂಗಾಲಾಗಿದ್ದರು. ಈ ಬಾರಿ ಇಳುವರಿ ಕುಂಠಿತ ನಡುವೆ ಅರಿಶಿನದ ದರ ಏರಿಕೆ ಕಂಡಿದ್ದು, ರೈತರಲ್ಲಿ ಸಂತಸ ತಂದಿದೆ.
ಪಾಲಿಶ್ ಮಾಡದ ಅರಿಶಿನಕ್ಕೆ ಕ್ವಿಂಟಲ್ ಗೆ 13,000 ಇಂದ 14,500 ರೂ. ದರ ಇದ್ದು, ಪಾಲಿಶ್ ಮಾಡಿದರೆ ಇನ್ನೂ 1500 ರೂ.ವರೆಗೂ ಹೆಚ್ಚು ದರ ಸಿಗಲಿದೆ.
ಕಳೆದ ವರ್ಷ ಮುಂಗಾರು ವೇಳೆ ದರ ಕುಸಿತದಿಂದ ಕಂಗಾಲಾದ ರೈತರು ಕೇಂದ್ರ ಸರ್ಕಾರ ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯಡಿ ಅರಿಶಿನ ಖರೀದಿಸಬೇಕೆಂದು ತೀವ್ರ ಹೋರಾಟ ಕೈಗೊಂಡಿದ್ದರು. ಕೊನೆಗೆ ಕೇಂದ್ರ ಸರ್ಕಾರ ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯಡಿ ಪ್ರತಿ ಕ್ವಿಂಟಲ್ ಗೆ 6694 ರೂ. ದರ ನಿಗದಿಪಡಿಸಿ ರೈತರಿಂದ ನೇರವಾಗಿ ಅರಿಶಿನ ಖರೀದಿಸಲು ಆರಂಭಿಸಿದ ನಂತರ ಮುಕ್ತ ಮಾರುಕಟ್ಟೆಯಲ್ಲಿ ಅರಿಶಿನ ದರ ಏರಿಕೆ ಕಂಡು ಕ್ವಿಂಟಲ್ ಗೆ 10,000 ವರೆಗೆ ಏರಿಕೆಯಾಗಿತ್ತು.
ಈ ಬಾರಿ ಮುಂಗಾರು ಆರಂಭವಾಗುವ ಮೊದಲೇ, ಅರಿಶಿನಕ್ಕೆ ಹೆಚ್ಚಿನ ದರ ಬಂದಿದೆ. ವ್ಯಾಪಾರಿಗಳು ರೈತರ ಮನೆ ಬಾಗಿಲಿಗೆ ಬಂದು ಅರಿಶಿನ ಖರೀದಿಸುತ್ತಿದ್ದಾರೆ. ಈಗಾಗಲೇ ಕಟಾವು ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಅರಿಶಿನ ದರ ಇನ್ನಷ್ಟು ಏರಿಕೆ ಕಾಣುವ ಸಾಧ್ಯತೆ ಇದೆ ಎನ್ನಲಾಗಿದೆ.