ಬೆಂಗಳೂರು: ಬಗರ್ ಹುಕುಂ ಅರ್ಜಿಗಳನ್ನು ಎರಡು ತಿಂಗಳಲ್ಲಿ ವಿಲೇವಾರಿ ಮಾಡಬೇಕು. ಇಲ್ಲದಿದ್ದಲ್ಲಿ ತಹಶೀಲ್ದಾರರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ವಿಕಾಸಸೌಧದಲ್ಲಿ ರಾಜ್ಯದ ಎಲ್ಲಾ ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳೊಂದಿಗೆ ವರ್ಚುಯಲ್ ಸಭೆ ನಡೆಸಿದ ಸಚಿವರು, ಬಗರ್ ಹುಕುಂ ಅರ್ಜಿ ವಿಲೇವಾರಿಗೆ ಮೀನಮೇಷ ಸರಿಯಲ್ಲ. ಎಲ್ಲ ತಹಶೀಲ್ದಾರರು ನವೆಂಬರ್ ಅಂತ್ಯದೊಳಗೆ ಬಗರ್ ಹುಕುಂ ಅರ್ಜಿಗಳ ಸಮರ್ಪಕ ವಿಲೇವಾರಿ ನಡೆಸಿ ಅರ್ಹ ರೈತರಿಗೆ ಭೂಮಿ ಮಂಜೂರು ಮಾಡಬೇಕು ಎಂದು ಸೂಚನೆ ನೀಡಿದ್ದಾರೆ.
ಬಗರ್ ಹುಕುಂ ಅರ್ಜಿಗಳ ವಿಲೇವಾರಿಗೆ ಎರಡು ತಿಂಗಳ ಗಡುವು ನೀಡುತ್ತಿದ್ದು, ಈ ಅವಧಿಯಲ್ಲಿಯೂ ಅರ್ಜಿಗಳ ಸಮರ್ಪಕ ವಿಲೇವಾರಿ, ಅರ್ಹ ರೈತರಿಗೆ ಭೂಮಿ ಮಂಜೂರು ಮಾಡದಿದ್ದರೆ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕೆಲವು ಅಧಿಕಾರಿಗಳ ಕೆಲಸ ತೃಪ್ತಿಕರವಾಗಿಲ್ಲ. ಬಡ ರೈತರ ಪರ ಕೆಲಸ ಮಾಡಲು ನಿರ್ಲಕ್ಷ ತೋರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ನಮೂನೆ 50, 53, 57ರ ಅಡಿ 14 ಲಕ್ಷ ಅರ್ಜಿ ಸಲ್ಲಿಕೆಯಾಗಿದ್ದು, ಇವುಗಳಲ್ಲಿ ಅನರ್ಹ ಅರ್ಜಿಗಳು ಅಧಿಕವಾಗಿವೆ. ಹೀಗಾಗಿ ಅಧಿಕಾರಿಗಳು ತಮ್ಮ ವಿವೇಚನೆ ಮೇಲೆ ಅನರ್ಹ ಅರ್ಜಿ ಅನೂರ್ಜಿತಗೊಳಿಸಿ ಅರ್ಹ ರೈತರಿಗೆ ಭೂಮಿ ಮಂಜೂರು ಮಾಡಬೇಕು ಎಂದು ಸೂಚಿಸಿದ್ದಾರೆ.