ಬೆಂಗಳೂರು: ರೈತರ ಜಮೀನು ಸಕ್ರಮಕ್ಕೆ ಮತ್ತೆ ಅರ್ಜಿ ಆಹ್ವಾನಿಸಲಾಗುವುದು ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಗಮನ ಸೆಳೆಯುವ ಸೂಚನೆ ವೇಳೆ, ರಾಜ್ಯದಲ್ಲಿ ಕಂದಾಯ ಪಾವತಿಸದ ಕಾರಣ ಪಹಣಿಗಳಲ್ಲಿ ಬೀಳು ಎಂದು ದಾಖಲಾಗಿರುವ ಜಮೀನುಗಳನ್ನು ಸಕ್ರಮಗೊಳಿಸಲು ಅರ್ಜಿ ಕರೆದಿದ್ದ ಅವಧಿಯಲ್ಲಿ ಅನೇಕ ರೈತರಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಮತ್ತೊಮ್ಮೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಬೇಕೆಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಮಾಧುಸ್ವಾಮಿ ಅವರು, ರಾಜ್ಯದಲ್ಲಿ ಕಂದಾಯ ಪಾವತಿಸದ ಕಾರಣಕ್ಕೆ ಸರ್ಕಾರಿ ಪಡ, ಬೀಳು ಎಂದು ದಾಖಲಾದ ರೈತರ ಜಮೀನುಗಳನ್ನು ಸಕ್ರಮಗೊಳಿಸಲು ಮತ್ತೊಮ್ಮೆ ಅರ್ಜಿ ಆಹ್ವಾನಿಸುವ ಕುರಿತಾಗಿ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದ್ದಾರೆ.
2014ರಲ್ಲಿ ಜಮೀನು ಸಕ್ರಮಕ್ಕೆ ಅರ್ಜಿ ಕರೆಯಲಾಗಿತ್ತು. ಜಿಲ್ಲಾಧಿಕಾರಿಗಳು ಅರ್ಜಿಗಳನ್ನು ಪರಿಶೀಲಿಸಿ ಇತ್ಯರ್ಥಪಡಿಸುತ್ತಿದ್ದಾರೆ. ರೈತರ ಅನುಕೂಲಕ್ಕಾಗಿ ಮತ್ತೊಮ್ಮೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡುವ ಕುರಿತು ಪರಿಶೀಲಿಸುವುದಾಗಿ ಸಚಿವರು ಭರವಸೆ ನೀಡಿದರು.